ಹೊಸಪೇಟೆ: ತಾಲೂಕಿನ ಕಮಲಾಪುರದಲ್ಲಿರುವ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ಅಧ್ಯಕ್ಷತೆಯಲ್ಲಿ ಆನೆಗುಂದಿ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ಸೋಮವಾರ ನಡೆಯಿತು.
ಸಭೆಯಲ್ಲಿ ಹೋಮ್ ಸ್ಟೇ ಹಾಗೂ ಫಾರ್ಮ್ ಹೌಸ್ ನಿರ್ಮಾಣ, ಪ್ರವಾಸಿಗರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಹೋಮ್ ಸ್ಟೇಗಳಿಗೆ ಶೀಘ್ರವಾಗಿ ಪರವಾನಗಿ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯವರಿಗೆ ಸೂಚನೆ ನೀಡಲಾಯಿತು.
ಶಾಸಕ ಜಿ. ಜನಾರ್ದನ ರೆಡ್ಡಿ ಮಾತನಾಡಿ, ಆನೆಗುಂದಿಯ ನವಬೃಂದವನ, ಚಿಂತಾಮಣಿ ಹಾಗೂ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ 12 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ, ತಂಗುದಾಣ ಹಾಗೂ ಶೌಚಾಲಯ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಪ್ರವಾಸಿಗರು ಆನೆಗುಂದಿಯನ್ನು ಬ್ಯಾಟರಿ ವಾಹನಗಳ ಮೂಲಕವೇ ಭೇಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.ಹೋಮ್ ಸ್ಟೇ ನಿರ್ಮಾಣಕ್ಕೆ ಸಂಬಂಧಿಸಿ ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಹೋಮ್ ಸ್ಟೇಗಳು 1ರಿಂದ 6 ಕೊಠಡಿಗಳವರೆಗೆ ಮಾತ್ರ ಹೋಮ್ ಸ್ಟೇಗಳನ್ನು ಅವಕಾಶ ಇದೆ. ಹೊಸ ಹೋಮ್ ಸ್ಟೇಗಳಿಗೆ ಅವಕಾಶವಿಲ್ಲ ಎಂದರು.
ಸಭೆಯಲ್ಲಿ ಇಲಾಖೆ ಆಯುಕ್ತ ರಮೇಶ್, ರಾಜವಂಶಸ್ಥ ರಾಜ ಶ್ರೀಕೃಷ್ಣದೇವರಾಯಲು ಹಾಗೂ ಅವರ ಧರ್ಮಪತ್ನಿ ರತ್ನಶ್ರೀ ಕೃಷ್ಣದೇವರಾಯಲು, ಮುಖಂಡರಾದ ಯಮನೂರು ಚೌಡ್ಕಿ, ಟಿ.ಜಿ. ಬಾಬು, ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ ಕಲಾಲ್, ಬಾಬು ರೆಡ್ಡಿ ಸೇರಿದಂತೆ ಗ್ರಾಮ ಮುಖಂಡರು ಉಪಸ್ಥಿತರಿದ್ದರು.
ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿರುವ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ಅಧ್ಯಕ್ಷತೆಯಲ್ಲಿ ಆನೆಗುಂದಿ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ಸೋಮವಾರ ನಡೆಸಿದರು.