ಮಡಿಕೇರಿ: ಜಗತ್ತಿನ ಯಾವ ಧರ್ಮವೂ ದ್ವೇಷ, ಆಶಾಂತಿ, ಅಸಹನೆಗಳನ್ನು ಎಂದಿಗೂ ಪ್ರತಿಪಾದಿಸಿಲ್ಲ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ಮಡಿಕೇರಿ ತಾಲೂಕಿನ ಮೇಕೇರಿ ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲಾ ಧರ್ಮ ಗ್ರಂಥಗಳು, ಧರ್ಮ ಗುರುಗಳು, ವಿದ್ವಾಂಸರು, ಋಷಿ ಮುನಿಗಳು, ಸೂಪಿ ಸಂತರು ಸೇರಿದಂತೆ ಎಲ್ಲ ಜ್ಞಾನಿಗಳು ಮನುಕುಲಕ್ಕೆ ಪರಸ್ಪರ ಶಾಂತಿ, ಪ್ರೀತಿ, ಸೌಹಾರ್ದ ಹಾಗೂ ಸಹಬಾಳ್ವೆಗಳನ್ನು ಬೋದಿಸಿದ್ದು ಅದರಂತೆ ಎಲ್ಲ ಸಮುದಾಯದ ಜನರು ಬಾಳಬೇಕು ಎಂದು ಕರೆ ನೀಡಿದರು.
ಹುಟ್ಟುವ ಯಾವುದೇ ವ್ಯಕ್ತಿ ಧರ್ಮವನ್ನಾಗಲಿ ಜಾತಿಯನ್ನಾಗಲಿ ಕೇಳಿಕೊಂಡು ಹುಟ್ಟುವುದಿಲ್ಲ. ಹುಟ್ಟಿನ ನಂತರ ಅಯಾ ಜಾತಿಯವರಾಗಿ ಧರ್ಮದವರಾಗಿ ಬಾಳುತ್ತಾರೆ. ಮನುಷ್ಯ ತನ್ನ ಬಾಳಿನಲ್ಲಿ ತನ್ನ ಜಾತಿ ಮತ್ತು ಧರ್ಮದ ಆಚರಣೆಯನ್ನು ಪಾಲಿಸಿ ಬೆಳೆಯುತ್ತಾ ಇತರರ ಧರ್ಮವನ್ನು ಗೌರವಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ರಾಜಕಾರಣ ಧರ್ಮದಿಂದ ಹೊರತಾಗಿ ಇದ್ದರೆ ಮಾತ್ರ ಅಭಿವೃದ್ಧಿಯನ್ನು ಕಾಣಬಹುದು ಎಂದು ಹೇಳಿದ ಅವರು, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಸಹಬಾಳ್ವೆಯ ವಾತಾವರಣ ಸೃಷ್ಟಿಯಾಗಿದ್ದು, ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿ ಕೆಲಸಗಳು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಸಯ್ಯದ್ ಸಮರುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಶಾಫಿ ಅಹದಿ ಸೋಮವಾರಪೇಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರರು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸಲಾಂ ಹಳ್ರಮಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಹನೀಫ್, ಪಿಯೂಸ್ ಫೆರೆರಾ, ಎ.ಎಲ್. ರಹೀಮ್, ರಫೀಕ್ ಮೇಕೇರಿ ಉಪಸ್ಥಿತರಿದ್ದರು.