ಮಣಿಪಾಲ: ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಬಸ್ಸೊಂದು ನಿಯಂತ್ರಣ ತಪ್ಪಿ ತಗ್ಗಿಗೆ ಉರುಳಿ ಬಿದ್ದು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.ಕಳೆದೊಂದು ತಿಂಗಳಲ್ಲಿ ಶಾಲಾ ಬಸ್‌ಗಳು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ 3ನೇ ಘಟನೆ ಇದಾಗಿದೆ. ಶಾಲಾಡಳಿತ ಮತ್ತು ಸಾರಿಗೆ ಇಲಾಖೆ ನಿರ್ಲಕ್ಷ್ಯದಿಂದ ಇಂತಹ ಆತಂಕಕಾರಿ ಘಟನೆಗಳು ನಡೆಯುತ್ತಿವೆ ಎಂದು ವಿದ್ಯಾರ್ಥಿಗಳ ಪೋಷಕರು ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳಗ್ಗೆ 8.30ರ ಸುಮಾರಿ ಇಲ್ಲಿನ ಕೊಡಂಗೆ ಎಂಬಲ್ಲಿ ವಿದ್ಯಾರ್ಥಿಗಳಿಬ್ಬರನ್ನು ಹತ್ತಿಸಿಕೊಂಡು, ಚಾಲಕ ಬಸ್‌ನ್ನು ಹಿಂದಕ್ಕೆ ತಿರುಗಿಸಲು ಯತ್ನಿಸುತ್ತಿದ್ದಾಗ, ಬಸ್‌ನ ಸವೆದ ಟಯರ್‌ಗಳು ಜಾರಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಉರುಳಿ ಬಿದ್ದಿದೆ.
ಇದರಿಂದ ಆಯ ತಪ್ಪಿ ಒಬ್ಬರ ಮೇಲೆ ಒಬ್ಬರು ಬಿದ್ದ ವಿದ್ಯಾರ್ಥಿಗಳುಲ್ಲಿ 7 ಮಂದಿಗೆ ಗಾಯಗಳಾಗಿವೆ. ಒಬ್ಬ ವಿದ್ಯಾರ್ಥಿನಿಯ ತಲೆಗೆ ಏಟಾಗಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಹೊಲಿಗೆ ಹಾಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.ಕೇವಲ 14 ಸೀಟುಗಳಿರುವ ಈ ಬಸ್‌ನಲ್ಲಿ 25ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿದೆ. ಬಸ್‌ನ ಟಯರ್‌ಗಳು ಸವೆದು ಸವಕಳಿಯಾಗಿದೆ. ಜೊತೆಗೆ ಬ್ರೇಕ್ ಕೂಡ ಸರಿಯಾಗಿಲ್ಲ, ಚಾಲಕ ಕೂಡ ಅತಿ ವೇಗದಿಂದ ಬಸ್ ಓಡಿಸುತ್ತಾರೆ. ಈ ಬಗ್ಗೆ ಗಮನಕ್ಕೆ ತಂದರೂ ಶಾಲಾಡಳಿತ ಮಂಡಳಿ ನಿರ್ಲಕ್ಷ ಮತ್ತು ಸಾರಿಗೆ ಅಧಿಕಾರಿಗಳು ಇಂತಹ ಬಸ್‌ಗಳನ್ನು ನಿಯಮಿತವಾಗಿ ಪರೀಕ್ಷೆ ಮಾಡದಿರುವುದೇ ಕಾರಣ ಎಂದು ವಿದ್ಯಾರ್ಥಿಗಳ ಹೆತ್ತವರು ಅಸಮಾಧಾನ ವ್ಯಕ್ಯಪಡಿಸಿದ್ದಾರೆ.
ಆಸ್ಪತ್ರೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಆರೋಗ್ಯ, ಹೆತ್ತವರಿಗೆ ವಿಚಾರಿಸಿ ಧೈರ್ಯ ತುಂಬಿದ್ದಾರೆ.ಜಿಲ್ಲಾ ಕಾಂಗ್ರೆಸ್ ನಾಯಕರಾದ ಅಶೋಕ್ ಕೊಡವೂರು, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್ ಅವರು ಆಸ್ಪತ್ರೆ ಮತ್ತು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದು ಬಸ್‌ಗಳನ್ನು ಸುವ್ಯವಸ್ಥೆಗೊಳಿಸುವಂತೆ ಸಲಹೆ ಮಾಡಿದ್ದಾರೆ.
ಅ್ಯಂಬುಲೆನ್ಸ್ ಚಾಲಕನ ಸಮಯ ಪ್ರಜ್ಞೆ: ಕೆಲ ದಿನಗಳ ಹಿಂದೆ ಮಣಿಪಾಲದ ಇನ್ನೊಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಬಸ್‌ನ ಚಾಲಕ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಬಸ್ ನಿಯಂತ್ರಣ ತಪ್ಪಿ ಹಿಮ್ಮುಖ ಚಲಿಸಿ, ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಆಗ ಅಲ್ಲಿದ್ದ ಆ್ಯಂಬ್ಯುಲೆನ್ಸ್ ಚಾಲಕ ಸಮಯಪ್ರಜ್ಞೆಯಿಂದ ಬಸ್ ಹತ್ತಿ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿ ಹೆಚ್ಚಿನ ದುರಂತವನ್ನು ತಪ್ಪಿಸಿದ್ದರು.
ಲೈಸೆನ್ಸ್ ಇಲ್ಲದ ಚಾಲಕನ ಬಂಧನ: ಇನ್ನೊಂದು ಘಟನೆಯಲ್ಲಿ ತಂದೆ ಚಾಲಕ, ಮಗ ನಿರ್ವಾಹಕನಾಗಿದ್ದ ಬಸ್ ನಿಯಂತ್ರಣ ತಪ್ಪಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದು ಕೂದಲೆಳೆ ಅಂತರದಿಂದ ಮಕ್ಕಳು ಪಾರಾಗಿದ್ದರು. ನಂತರ ತಂದೆಯ ಬದಲಿಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಮಗ ಬಸ್ ಚಲಾಯಿಸಿದ್ದ, ತನ್ನ ತಪ್ಪನ್ನು ಮುಚ್ಚಿಟ್ಟು ತಂದೆಯ ಮೇಲೆಯೇ ದೂರು ಸಲ್ಲಿಸಿದ್ದ. ಸತ್ಯ ತಿಳಿದ ಮೇಲೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು.