ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಸರಳವಾಗಿ, ಯಾವುದೇ ಮೆರವಣಿಗೆ ಆಡಂಬರವಿಲ್ಲದೆ, ಗುರುವಾರ ಚಿಕ್ಕೋಡಿಯ ಎಸಿ ಕಚೇರಿಯಲ್ಲಿ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವಾಗ ಪ್ರಿಯಾಂಕಾಗೆ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನ ಪರಿಷತ್ ಸದಸ್ಯ, ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ರಾಜು ಕಾಗೆ, ಮಹೇಂದ್ರ ತಮ್ಮನ್ನವರ, ವಿಶ್ವಾಸ ವೈದ್ಯ, ಆಸೀಫ್ (ರಾಜು) ಸೇಠ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವ ತನಕ ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ಶ್ಯಾಮ್ ಘಾಟಗೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಉತ್ತಮ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಪ್ರಭಾಕರ ಈರಪ್ಪ ಕೋರೆ, ಸಿದ್ದಪ್ಪ ಮರ್‍ಯಾಯಿ ಸೇರಿದಂತೆ ನೂರಾರು ಮುಖಂಡರು ಚಿಕ್ಕೋಡಿ ಎಸಿ ಕಚೇರಿ ಆವರಣದ ಹೊರಗೆ ನಿಂತಿದ್ದರು.ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಜನರ ಒಲವು ವ್ಯಕ್ತವಾಗಿದೆ. ಆದರೆ ಇಷ್ಟೇ ಅಂತರದಿಂದ ಗೆಲ್ಲುತ್ತಾರೆಂದು ಈಗಲೇ ಹೇಳಲು ಆಗುವುದಿಲ್ಲ ಎಂದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಚಿಕ್ಕೋಡಿ, ಬೆಳಗಾವಿಯಲ್ಲಿ ಈ ಬಾರಿ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯದಡಿ ಎಸ್.ಟಿ, ಲಿಂಗಾಯತ, ಮರಾಠಾ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಇದೇ ಫ್ಯಾಕ್ಟರ್ ನಮಗೆ ಪ್ಲಸ್ ಆಗಲಿದೆ. ಶಂಭು ಕಲ್ಲೋಳಿಕರ ನಮ್ಮ ಪಕ್ಷದವರೇ ಅಲ್ಲ, ಅವರ ಸ್ಪರ್ಧೆಯಿಂದ ನಾವು ತಲೆ ಕೆಡಿಸಿಕೊಳ್ಳಲ್ಲ. ಎರಡೂ ಕ್ಷೇತ್ರಗಳಲ್ಲಿ ಉತ್ತಮ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ. ಎಷ್ಟು ಅಂತರ ಅನ್ನೊದನ್ನು ಮತದಾರರು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ಕ್ಷೇತ್ರದಲ್ಲಿ ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿ ಸಕ್ರಿಯವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ವಿರೋಧ ಪಕ್ಷದ ನಾಯಕರು, ಅವರು ತಮ್ಮ ಪಕ್ಷದ ಕೆಲಸ ಮಾಡುತ್ತಾರೆ. ನಾವು ನಮ್ಮ ಪಕ್ಷದ ಕೆಲಸ ಮಾಡುತ್ತೇವಷ್ಟೇ ಎಂದು ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಜಿಲ್ಲೆಯ ಎಲ್ಲ ಸಚಿವರ, ಶಾಸಕರ, ಮಾಜಿ ಶಾಸಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದು ಸಂತಸ ತಂದಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.