ಹೊಸಪೇಟೆಯಲ್ಲಿ ಶ್ರೀರಾಮ ನವಮಿ ನಿಮಿತ್ತ ರಾಮಧ್ಯಾನ

| Published : Apr 19 2024, 01:05 AM IST

ಸಾರಾಂಶ

ಪತಂಜಲಿ ಯೋಗ ಸಮಿತಿಯಿಂದ ಹೊಸಪೇಟೆ ನಗರದ ಸ್ವಾತಂತ್ರ‍್ಯ ಉದ್ಯಾನದಲ್ಲಿ ಬುಧವಾರ ರಾಮಧ್ಯಾನದ ಮೂಲಕ ಶ್ರೀರಾಮ ನವಮಿ ಆಚರಿಸಲಾಯಿತು.

ಹೊಸಪೇಟೆ: ಪತಂಜಲಿ ಯೋಗ ಸಮಿತಿಯಿಂದ ನಗರದ ಸ್ವಾತಂತ್ರ‍್ಯ ಉದ್ಯಾನದಲ್ಲಿ ಬುಧವಾರ ರಾಮಧ್ಯಾನದ ಮೂಲಕ ಶ್ರೀರಾಮ ನವಮಿ ಆಚರಿಸಲಾಯಿತು.

ಪತಂಜಲಿ ಯೋಗ ಸಮಿತಿಯಿಂದ ನಗರದ 28ಕ್ಕೂ ಅಧಿಕ ಕಡೆಗಳಲ್ಲಿ ಉಚಿತ ಯೋಗ ತರಬೇತಿ ನಡೆಯುತ್ತಿದ್ದು, ಈ ಎಲ್ಲ ಕೇಂದ್ರಗಳ ಸಂಚಾಲಕರು, ಸಾಧಕರ ಉಪಸ್ಥಿತಿಯೊಂದಿಗೆ ಈ ರಾಮಧ್ಯಾನ ನಡೆಯಿತು. ಯೋಗ ಗುರು ಹಾಗೂ ಪತಂಜಲಿ ಯೋಗ ಸಮಿತಿಯ ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್‌ ಕರ‍್ವಾ ಅವರು ಆರಂಭದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ರಾಮನವಮಿಯ ಆಚರಣೆಗೆ ಚಾಲನೆ ನೀಡಿದರು.

ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ. ಎಫ್‌.ಟಿ. ಹಳ್ಳಿಕೇರಿ ಮಾತನಾಡಿ, ಪ್ರಜೆಗಳ ಯೋಗಕ್ಷೇಮವೇ ಶ್ರೀರಾಮನ ಮುಖ್ಯ ಧ್ಯೇಯವಾಗಿತ್ತು. ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಯಾರಿಗೂ ಅನ್ಯಾಯ ಆಗಬಾರದು, ಜನಸಾಮಾನ್ಯನ ಅಭಿಪ್ರಾಯಕ್ಕೂ ಮನ್ನಣೆ ಸಿಗಬೇಕು ಎಂಬ ಹಲವಾರು ಆದರ್ಶಗಳು ಶ್ರೀರಾಮನ ಆಡಳಿತದ ಭಾಗವಾಗಿತ್ತು. ಹೀಗಾಗಿಯೇ ರಾಮರಾಜ್ಯ ಪರಿಕಲ್ಪನೆ ಎಂಬುದು ಇಡೀ ಜಗತ್ತು ಮೆಚ್ಚುವಂತಹ ಆದರ್ಶ ಆಡಳಿತವಾಗಿದೆ ಎಂದರು.

ಬಳಿಕ ರಾಮ ಭಜನೆಗಳು ನಡೆದವು. ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತರ ವೇಷಧಾರಿ ಮಕ್ಕಳು ಗಮನ ಸೆಳೆದರು. ಗುರುರಾಜ ಭಟ್‌ ಅವರು ಪೂಜೆ ನೆರವೇರಿಸಿದರು. ಕೋಸಂಬರಿ, ಪಾನಕ, ಅವಲಕ್ಕಿ, ಬಾಳೆಹಣ್ಣು ಪ್ರಸಾದವನ್ನು ವಿತರಿಸಲಾಯಿತು.

ಯೋಗ ಸಾಧಕರಾದ ಅನಂತ ಜೋಶಿ, ಪ್ರಕಾಶ ಕುಲಕರ್ಣಿ, ಶಿವಮೂರ್ತಿ, ಶ್ರೀನಿವಾಸ ಮಂಚಿಕಟ್ಟಿ, ಶ್ರೀಧರ, ಸತೀಶ ಪಾವಂಜೆ, ಡಾ. ರಾಜಶೇಖರ, ಕಟ್ಟಾ ನಂಜಪ್ಪ, ಮಂಗಳಮ್ಮ, ಗೌರಮ್ಮ, ಪ್ರಮೀಳಮ್ಮ, ಚಂದ್ರಿಕಾ, ಶೈಲಜಾ ಕಳಕಪ್ಪ, ಶ್ರೀರಾಮ ಮತ್ತಿತರರಿದ್ದರು.