ಶಿಗ್ಗಾಂವಿ: ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಗಟಾರ, ದೇವಸ್ಥಾನ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ಜನರ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.
ತಾಲೂಕಿನ ವನಹಳ್ಳಿ, ಕಾಮನಹಳ್ಳಿ, ಗೊಟಗೋಡಿ, ಬಿಶೆಟ್ಟಿಕೊಪ್ಪ, ಕೃಷಿನಗರ ಹಾಗೂ ಕುಂದೂರ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಆತ್ಮ ಇರುವುದು ಹಳ್ಳಿಗಳಲ್ಲಿ ಎಂದು ಗಾಂಧೀಜಿ ನಂಬಿದ್ದರು. ಗ್ರಾಮಗಳು ಆರ್ಥಿಕವಾಗಿ ಸ್ವಾವಲಂಬಿ, ಸಬಲ ಮತ್ತು ಅಭಿವೃದ್ಧಿ ಹೊಂದದೆ ದೇಶದ ಸಮಗ್ರ ಪ್ರಗತಿ ಸಾಧ್ಯವಿಲ್ಲ ಎಂಬುದು ಅವರ ಅಚಲವಾದ ನಂಬಿಕೆಯಾಗಿತ್ತು, ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು, ಕೃಷಿ ಅಭಿವೃದ್ಧಿ ಮತ್ತು ಉದ್ಯೋಗದಂತಹ ಮೂಲಭೂತ ಸೌಲಭ್ಯಗಳು ದೊರೆತಾಗ ಮಾತ್ರ ನಿಜವಾದ ಪ್ರಗತಿ ಸಾಧಿಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.ವನಹಳ್ಳಿ ಗ್ರಾಮದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ರಸ್ತೆ ಹಾಗೂ ಸಿ.ಸಿ. ಗಟಾರ ನಿರ್ಮಾಣ ಮಾಡಲಾಗುತ್ತಿದೆ, ಜೊತೆಗೆ 83 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದೆ, ಕಾಮನಹಳ್ಳಿ ಗ್ರಾಮದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಗೊಟಗೋಡಿ ಗ್ರಾಮದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಶ್ರೀ ಗ್ರಾಮದೇವಿ ದೇವಸ್ಥಾನ ನಿರ್ಮಾಣ ಹಾಗೂ ₹ 20 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಸಿ.ಸಿ. ಗಟಾರ ನಿರ್ಮಾಣ ಸೇರಿದಂತೆ ಒಟ್ಟು ₹ 30 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ, ಬಿಶೆಟ್ಟಿಕೊಪ್ಪ ಗ್ರಾಮದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಹಾಗೂ ಸಿ.ಸಿ. ಗಟಾರ ನಿರ್ಮಾಣ ಕಾಮಗಾರಿಗಳಿಗೆ, ಕೃಷಿನಗರದಲ್ಲಿ ₹15 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಹಾಗೂ ಸಿ.ಸಿ. ಗಟಾರ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಇನ್ನು ಕುಂದೂರ ಗ್ರಾಮದಲ್ಲಿ ₹ 262 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವುದರ ಜೊತೆಗೆ 239 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಮುಖಂಡರಾದ ಆನಂದ ಲಮಾಣಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಗ್ರಾಮಗಳ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.