ನವಲಗುಂದ:
ಆಸ್ತಿ ಮಾರಾಟದ ವಿಷಯವಾಗಿ ನಡೆದ ಗಲಾಟೆಯಲ್ಲಿ ರೈತನೊಬ್ಬ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿನ ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರಡ್ಡಿ ಅವರ ಸಂಪರ್ಕ ಕಚೇರಿ ಎದುರೇ ಸೋಮವಾರ ನಡೆದಿದೆ.ಈ ನಡುವೆ ಆತ್ಮಹತ್ಯೆಗೆ ಯತ್ನಿಸಿದ ರೈತನ ವಿರುದ್ಧ ತಮ್ಮ ಮೇಲೆ ಒತ್ತಡ ಹಾಕಲು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಯಮನೂರು ಗ್ರಾಪಂ ಪಿಡಿಒ ದೂರು ದಾಖಲಿಸಿದ್ದಾರೆ.
ತಾಲೂಕಿನ ಪಡೆಸೂರ ಗ್ರಾಮದ ಮಹಾಂತೇಶ ತುರನೂರ (38) ಆತ್ಮಹತ್ಯೆಗೆ ಯತ್ನಿಸಿದವ.ಮಹಾಂತೇಶ ಇತ್ತೀಚಿಗೆ ತನ್ನ ಮನೆ ಮಾರಾಟ ಮಾಡಿ ಹಣವನ್ನು ಪಡೆದಿದ್ದ. ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದ. ಆದರೆ, ಪಂಚಾಯಿತಿಗೆ ಆಗಮಿಸಿ ಆಸ್ತಿ ಮಾರಾಟ ಮಾಡಿದ ರಕಂ ತನಗೆ ಬಂದಿಲ್ಲ. ಆದಕಾರಣ ಖರೀದಿ ಪತ್ರ ಮಾಡಿಸಬಾರದು ಎಂದು ಲಿಖಿತ ತಕರಾರು ಅರ್ಜಿ ನೀಡಿದ್ದ. ಆಸ್ತಿ ಖರೀದಿ ಮಾಡಿದ ಶಂಕ್ರವ್ವ ಬಸಪ್ಪ ತುರನೂರ ಅವರು, ಆರ್‌ಟಿಜಿಎಸ್ ಮೂಲಕ ದುಡ್ಡನ್ನು ನೀಡಿರುವುದಾಗಿ ದಾಖಲೆ ನೀಡಿದ್ದರು. ಈ ಮಾಹಿತಿಯನ್ನು ಮಹಾಂತೇಶನ ಮೊಬೈಲ್‌ಗೆ ಕಳುಹಿಸಲಾಗಿತ್ತು. ಆದರೂ ಸೋಮವಾರ ಪಂಚಾಯಿತಿ ಕಚೇರಿಗೆ ಆಗಮಿಸಿ ಖರೀದಿ ಮಾಡಿಸಬಾರದು ಎಂದು ಕೋರಿದ್ದರೂ ಅದ್ಹೇಗೆ ಮಾಡಿಸಿದ್ದೀರಿ ಎಂದು ಜಗಳ ತೆಗೆದು, ತಮ್ಮ ಮೇಲೆ ಒತ್ತಡ ಹೇರಲು ಹಾಗೂ ಪ್ರಭಾವ ಬೀರಲು ಪ್ರಯತ್ನಿಸಿದ. ಬಳಿಕ ತನ್ನ ಹೊಟ್ಟೆಗೆ ತಾನೇ ಚಾಕುವಿನಿಂದ ಇರಿದು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶನನ್ನು ತಕ್ಷಣವೇ ಸಾರ್ವಜನಿಕರು ಹಾಗೂ ಪೊಲೀಸರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ, ಅಲ್ಲಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ರವಾನಿಸಿದ್ದಾರೆ. ನವಲಗುಂದ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.