ಉತ್ತರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಾತಿ ಅಂದೋಲನ

| Published : Nov 06 2025, 04:15 AM IST

ಸಾರಾಂಶ

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬಾಕಿ ಇರುವ 694 ಕೋಟಿ ರು. ಆಸ್ತಿ ತೆರಿಗೆ ವಸೂಲಿಗೆ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬಾಕಿ ಇರುವ 694 ಕೋಟಿ ರು. ಆಸ್ತಿ ತೆರಿಗೆ ವಸೂಲಿಗೆ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4,57,951 ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿ ಬರಲಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 1,242 ಕೋಟಿ ರು. ಸಂಗ್ರಹಿಸಬೇಕಾಗಿದೆ. ಈಗಾಗಲೇ ಮೊದಲ ಏಳು ತಿಂಗಳು ಪೂರ್ಣಗೊಂಡಿದ್ದು, ಈವರೆಗೆ 548 ಕೋಟಿ ತೆರಿಗೆ ಸಂಗ್ರಹವಾಗಿದ್ದು, ಬಾಕಿ ಇರುವ 694 ಕೋಟಿ ರು. ವಸೂಲಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಣೆ ಮಾಡಲು ಹಾಗೂ ಕಡಿಮೆ ವಿಸ್ತೀರ್ಣ ಘೋಷಣೆ ನೀಡಿರುವ ಆಸ್ತಿಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡಲು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೂಚಿಸಿದ್ದಾರೆ.

ವಿಶೇಷ ವಸೂಲಾತಿ ತಂಡ

ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಜರುಗಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ವಸೂಲಾತಿ ತಂಡಗಳು ರಚನೆಗೊಂಡಿದ್ದು, ಪ್ರತಿಯೊಂದು ಪ್ರದೇಶದ ಮಟ್ಟದಲ್ಲಿ ಕಂದಾಯ ವಸೂಲಾತಿ ಕಾರ್ಯ ಪ್ರಾರಂಭಿಸಲು ನಿರ್ದೇಶಿಸಿದ್ದಾರೆ. ಒಟ್ಟು 1,697 ಆಸ್ತಿಗಳಿಗೆ ಕಂದಾಯ ಪರಿಷ್ಕರಣೆ ಅಗತ್ಯವಿದ್ದು, 78,565 ಆಸ್ತಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವುದರಿಂದ ಆಸ್ತಿ ತೆರಿಗೆ ಸಂಗ್ರಹಣಾ ಕಾರ್ಯ ನಡೆಯುತ್ತಿದೆ.

ಬಾಕ್ಸ್‌...

ಆಸ್ತಿ ವಶಕ್ಕೂ ಸೂಚನೆ

ಹಲವಾರು ವರ್ಷಗಳಿಂದ ತೆರಿಗೆ ಪಾವತಿಸದ ವಸತಿಯೇತರ ಸುಸ್ತಿದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೂ ತೆರಿಗೆ ಪಾವತಿಸದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಂತಹ ಆಸ್ತಿಗಳಿಗೆ ಬೀಗಮುದ್ರೆ ಹಾಕುವ ಕ್ರಮ ಕೈಗೊಳ್ಳುವಂತೆ ಆಯುಕ್ತರು ತಿಳಿಸಿದ್ದಾರೆ.