ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಪಟ್ಟಣದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಲು ಎರಡು ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆಂದು ಶಾಸಕ ಡಾ.ಎಂ. ಚಂದ್ರಪ್ಪ ತಿಳಿಸಿದರು.ತಾಲೂಕಿನ ಹಿರೇಎಮ್ಮಿಗನೂರು ಗ್ರಾಮದಲ್ಲಿ ₹60 ಲಕ್ಷ ವೆಚ್ಚದಲ್ಲಿ ನೂತನ ಉಪ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ಸಲ್ಲಿಸಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.ಈ ಭಾಗದಲ್ಲಿ ಪಬ್ಲಿಕ್ ಶಾಲೆಯನ್ನು ಕಟ್ಟಿದರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಮಕ್ಕಳಿಗೆ ಅನುಕೂಲವಾಗುತ್ತದೆ. ಎಲ್.ಕೆ.ಜಿ. ಯಿಂದ ಹಿಡಿದು ಪಿಯುಸಿವರೆಗೆ ಶಿಕ್ಷಣವನ್ನು ಪಡೆದು ಬಡ ಮಕ್ಕಳು ಸಹ ಇಂಜಿನಿಯರ್ ಡಾಕ್ಟರ್ ಆಗಬಹುದು. ಕಾಶಿಪುರದಲ್ಲಿ ಈಗಾಗಲೆ ಪಬ್ಲಿಕ್ ಶಾಲೆಯನ್ನು ಕಟ್ಟಿದ್ದು, ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಒಂದೆ ಕಟ್ಟಡದಲ್ಲಿ 45 ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಊಟ, ಬಟ್ಟೆ, ಪುಸ್ತಕ, ಕಂಪ್ಯೂಟರ್, ಶೂಗಳನ್ನು ನೀಡಲಾಗುತ್ತಿದೆ. ಹೊಳಲ್ಕೆರೆ ಪಟ್ಟಣದ ಎಂ.ಎಂ. ಪ್ರೌಢಶಾಲೆಯಲ್ಲಿ ಕೇವಲ ಇನ್ನೂರು ಮಕ್ಕಳಿದ್ದರು. ಅಲ್ಲಿಯೂ ಪಬ್ಲಿಕ್ ಶಾಲೆ ಕಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆಂದು ಹೇಳಿದರು.ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಯ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆನ್ನುವ ಕಾರಣಕ್ಕಾಗಿ ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದೇನೆ. ಸ್ವಂತ ಖರ್ಚಿನಿಂದ ಬಸ್‍ಗೆ ಡೀಸೆಲ್, ಚಾಲಕ, ಕಂಡಕ್ಟರ್‍ಗೆ ಸಂಬಳ ಕೊಡುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಪುಣ್ಯದ ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಐದು ಲೈಲಾಂಡ್ ಬಸ್‍ಗಳನ್ನು ಸರ್ಕಾರಿ ಶಾಲೆ ಮಕ್ಕಳಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಚಿಕ್ಕಜಾಜೂರು ಸಮೀಪ ಹದಿನೈದು ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ವೈದ್ಯರು ತಂಗಲು ವಸತಿ ಗೃಹ ನಿರ್ಮಾಣಕ್ಕಾಗಿ ಎರಡು ಕೋಟಿ ರು. ನೀಡಿದ್ದೇನೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕ್ಷೇತ್ರದಲ್ಲಿ ಯಾರು ಏನೆ ಕೇಳಲಿ ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ಹುಡುಕಿ ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಶ್ರೀಮತಿ ರೇಖಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಿಂಗರಾಜು, ಬಸವರಾಜಪ್ಪ, ಉಮೇಶ್, ಕಲ್ಲೇಶ್, ಈಶಣ್ಣ, ತಿಪ್ಪೇಶಣ್ಣ, ನಾಗರಾಜ್, ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.ಫೋಟೋ ವಿವರಣೆ : ಉಪ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಪ್ರಾಥಮಿಕ ಶಾಲೆಯ ಮೂರು ನೂತನ ಕೊಠಡಿಗಳನ್ನು ಉದ್ಘಾಟಿಸಿ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿದರು.