ಚನ್ನಪಟ್ಟಣ ಚುನಾವಣೆ ಕಾರ್ಯತಂತ್ರವೇ ನಾಗಮಂಗಲ ಗಲಭೆ : ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟ-ಕಿಮ್ಮನೆ ರತ್ನಾಕರ್‌

| Published : Sep 15 2024, 01:52 AM IST / Updated: Sep 15 2024, 12:40 PM IST

ಚನ್ನಪಟ್ಟಣ ಚುನಾವಣೆ ಕಾರ್ಯತಂತ್ರವೇ ನಾಗಮಂಗಲ ಗಲಭೆ : ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟ-ಕಿಮ್ಮನೆ ರತ್ನಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊಣೆಗಾರಿಕೆ ಇರುವ ರಾಜಕೀಯ ಪಕ್ಷವಾಗಿ ನಾಗಮಂಗಲದ ಪ್ರಕರಣವನ್ನು ತಣ್ಣಗಾಗಿಸುವ ಬದಲು ಅದಕ್ಕೆ ತುಪ್ಪ ಸುರಿಯು ತ್ತಿರುವ ಉದ್ದೇಶ ಸ್ಪಷ್ಟವಾಗಿದ್ದು, ಪ್ರಕರಣದಲ್ಲಿ ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

 ತೀರ್ಥಹಳ್ಳಿ :  ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿ ನಡೆದಿರುವ ಪ್ರಕರಣದ ಹಿಂದೆ ಬಿಜೆಪಿ ಕೈವಾಡವಿದ್ದು, ರಾಜಕೀಯ ಹಿತಾಸಕ್ತಿಯಿಂದ ಈ ಪ್ರಕರಣಕ್ಕೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರವಾಗಿ ಆರೋಪಿಸಿದರು.

ಹೊಣೆಗಾರಿಕೆ ಇರುವ ರಾಜಕೀಯ ಪಕ್ಷವಾಗಿ ನಾಗಮಂಗಲದ ಪ್ರಕರಣವನ್ನು ತಣ್ಣಗಾಗಿಸುವ ಬದಲು ಅದಕ್ಕೆ ತುಪ್ಪ ಸುರಿಯು ತ್ತಿರುವ ಉದ್ದೇಶ ಸ್ಪಷ್ಟವಾಗಿದ್ದು, ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಪೂರ್ವಸಿದ್ಧತೆಯ ಕಾರ್ಯತಂತ್ರವಾಗಿದೆ. ಹೀಗಾಗಿ ಶಾಂತಿಯನ್ನು ಬಯಸದ ಪಕ್ಷ ನಾಗಮಂಗಲ ಪ್ರಕರಣವನ್ನು ಆರಿಸುವ ಬದಲು ಪ್ರಕ್ಷುಬ್ಧತೆ ಸೃಷ್ಟಿಗೆ ಯತ್ನಿಸುತ್ತಿದೆ ಎಂದೂ ಶನಿವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.

ವಿಘಟನೆಯ ಆಧಾರದಲ್ಲಿಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷಕ್ಕೆ ಬಹುತ್ವ ಭಾರತದ ಬಗ್ಗೆ ಕಲ್ಪನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ತನಗೆ ನಷ್ಟ ಆಗುತ್ತದೆಂಬ ಅರಿವಿದ್ದರೂ ದೇಶದ ಏಕತೆಯ ದೃಷ್ಟಿಯಿಂದ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದೆ. ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಬಗ್ಗೆ ವಿರೋಧಿ ಭಾವನೆಯನ್ನು ಹೊಂದಿ ರುವ ಬಿಜೆಪಿ ದೇಶದ ಸಂವಿಧಾನವನ್ನೇ ಬದಲಿಸುವ ಹಿಡನ್ ಅಜೆಂಡಾ ಹೊಂದಿದ್ದು, ಆರ್‌ಎಸ್‌ಎಸ್‌ನ ಚಿಂತನಾ ಗಂಗಾ ಪುಸ್ತಕದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು.

ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯವಾಗಿದೆ. ಆರ್‌ಎಸ್‍ಎಸ್ ಮತ್ತು ಬಿಜೆಪಿ ಜಾತಿ ವ್ಯವಸ್ಥೆ ಇರಬೇಕು ಎಂದು ವಾದಿಸುವವರು. 118 ಕೋಟಿ ಹಿಂದೂಗಳಿರುವ ಈ ದೇಶದಲ್ಲಿ ಹಿಂದೂಗಳಿಗೆ ವಿರುದ್ಧವಾದ ಆಡಳಿತ ವ್ಯವಸ್ಥೆ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದೂ ಪ್ರಶ್ನಿಸಿ, ಹಿಂದುತ್ವ, ಮೀಸಲಾತಿ ಮತ್ತು ಸಂವಿಧಾನದ ಕುರಿತು ಆ ಪಕ್ಷದ ಮುಖಂಡರೊಂದಿಗೆ ಸಂವಾದಕ್ಕೆ ನಾನು ಸದಾ ಸಿದ್ಧನಿದ್ದೇನೆ ಎಂದು ಸವಾಲೆಸೆದರು.1983 ರಿಂದ ಈ ವರೆಗೆ ತೀರ್ಥಹಳ್ಳಿಯಲ್ಲಿ ನಡೆದಿರುವ ಎಲ್ಲಾ ಗಲಭೆಗಳಿಗೆ ಶಾಸಕ ಆರಗ ಜ್ಞಾನೇಂದ್ರರೇ ಕಾರಣರಾಗಿದ್ದಾರೆ. ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ನಡೆದಿರುವ ಪಿಎಸ್‍ಐ ಮತ್ತು ಬಿಟ್ ಕಾಯಿನ್ ಹಗರಣಗಳ ತನಿಖೆ ಆಗಬೇಕು. ಅವರ ಅಧಿಕಾರವಧಿಯಲ್ಲಿ ನಡೆದಿರುವ ಗ್ರಾಮೀಣಾಭಿವೃದ್ಧಿ ಭವನ, ಪೋಲಿಸ್ ವಸತಿ ಸಮುಚ್ಚಯಗಳು ಸೇರಿ ಎಲ್ಲಾ ಕಾಮಗಾರಿ ಗಳೂ ಕಳಪೆಯಾಗಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ತಾಕತ್ತಿದ್ದರೆ ಈಗಲಾದರೂ ನಂದಿತಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ತನಿಖೆಯಾದರೆ ಜ್ಞಾನೇಂದ್ರರಿಗೆ ಶಿಕ್ಷೆಯಾಗುವುದು ಖಚಿತ ಎಂದರು.

ಇಡೀ ವಿಶ್ವದ ಗೌರವಕ್ಕೆ ಪಾತ್ರರಾಗಿರುವ ಮಹಾತ್ಮಗಾಂಧಿಯವರು ಗಾಂಧಿ ಸಿನೆಮಾ ಬಂದ ನಂತರ ಹೆಚ್ಚು ಪ್ರಚಾರಕ್ಕೆ ಬಂದಿದ್ದಾರೆ ಎಂಬ ಪ್ರದಾನಿ ನರೇಂದ್ರ ಮೋದಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಮಹಾತ್ಮಗಾಂಧಿ ಹಾಗೂ ಡಾ.ಅಂಬೇಡ್ಕರ್ ಕುರಿತು ಯುವ ಜನತೆಯಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಕ್ಷೇತ್ರದ ಗ್ರಾಪಂ ಮಟ್ಟದಲ್ಲಿ ಮುಂದಿನ ಆರು ತಿಂಗಳ ಕಾಲ ಜಾಥಾ ನಡೆಸುವುದಾಗಿಯೂ ತಿಳಿಸಿದರು.

ಪಕ್ಷದ ಮುಖಂಡರಾದ ಕೆಸ್ತೂರು ಮಂಜುನಾಥ್, ಡಿ.ಎಸ್.ವಿಶ್ವನಾಥಶೆಟ್ಟಿ, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ರತ್ನಾಕರ ಶೆಟ್ಟಿ ಹಾಗೂ ಮಂಜುಳಾ ನಾಗೇಂದ್ರ, ವಿಲಿಯಂ ಮಾರ್ಟಿಸ್, ಕಿಶೋರ್, ಕೆಳಕೆರೆ ಪೂರ್ಣೇಶ್ ಇದ್ದರು.