ಸಾರಾಂಶ
ಸಿದ್ದಲಿಂಗ ಕಿಣಗಿ
ಕನ್ನಡಪ್ರಭ ವಾರ್ತೆ ಸಿಂದಗಿಸಿಂದಗಿ ನೆಲದಲ್ಲಿ ಅನೇಕ ಆದರ್ಶ ವ್ಯಕ್ತಿಗಳು, ಮಹನೀಯರು ಹುಟ್ಟಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಿಂದಗಿಯ ಹೆಸರನ್ನು ಬೆಳೆಸಿದ್ದಾರೆ. ಆ ಮಹನೀಯರನ್ನು ಅಜರಾಮರವಾಗಿಸಲು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪಟ್ಟಣದ ಪ್ರಮುಖ ರಸ್ತೆಗಳಿಗೆ ಸಾಧಕರ ಹೆಸರನ್ನಿಡಲು ಮುಂದಾಗಿದ್ದು, ಇದು ಪ್ರಶಂಸೆಗೆ ಪಾತ್ರವಾಗಿದೆ.ಅಶೋಕ ಮನಗೂಳಿ ಶಾಸಕರಾದ ಮೇಲೆ ಸಿಂದಗಿಯ ಪ್ರಮುಖ ರಸ್ತೆಗಳಿಗೆ ಮರು ಜೀವ ಬಂದಂತಾಗಿದೆ. ಮುಖ್ಯ ರಸ್ತೆಗಳ ಅಗಲಿಕರಣ, ಪಾದಚಾರಿ ಮಾರ್ಗಗಳ ನಿರ್ಮಾಣ ಒಟ್ಟಾರೆ ಸಿಂದಗಿ ಸೌಂದರ್ಯಿಕರಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ವಿಜಯಪುರ ಬೈಪಾಸ್‌ನಿಂದ ಬಸವೇಶ್ವರ ವೃತ್ತದವರೆಗೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ರಸ್ತೆ, ಬಸವೇಶ್ವರ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ಮಾಜಿ ಸಚಿವ ಎಂ.ಸಿ.ಮನಗೂಳಿ ರಸ್ತೆ, ಬಸವೇಶ್ವರ ವೃತ್ತದಿಂದ ಡಾ.ಅಂಬೇಡ್ಕರ ವೃತ್ತದವರೆಗೆ ಸಿಂದಗಿ ಪತ್ರಿಕಾ ರಂಗದ ಭೀಷ್ಮ ರೇ.ಚ.ರೇವಡಿಗಾರ ರಸ್ತೆ, ಗೋಲಗೇರಿ ಬೈಪಾಸ್‌ನಿಂದ ಕನಕದಾಸ ವೃತ್ತದವರೆಗೆ ಸ್ವಾಮಿ ರಮಾನಂದ ತೀರ್ಥರ ರಸ್ತೆ, ಸಂಗಮ ಹೋಟೆಲ್ ರಸ್ತೆಯಿಂದ ಗೌಡರ ಓಣಿವರೆಗೆ ಡಾ.ಎಸ್.ಜಿ.ಬಮ್ಮಣ್ಣಿ ರಸ್ತೆ, ಸ್ವಾಮಿ ವಿವೇಕಾನಂದ ವೃತ್ತದಿಂದ ಟಿಪ್ಪು ವೃತ್ತದವರೆಗೆ ಗದುಗಿನ ತೋಂಟದ ಡಾ.ಸಿದ್ದಲಿಂಗ ಸ್ವಾಮಿಗಳ ರಸ್ತೆ ಮತ್ತು ಕೆರೆಗೆ ಎಮ್.ಸಿ.ಮನಗೂಳಿ ಕೆರೆ ಎಂದು ನಾಮಕರಣ ಮಾಡುವ ಕಾರ್ಯ ನಡೆದಿದೆ.
ಯಾರು ಈ ಸಾಧಕರು..?ಗದುಗಿನ ತೊಂಟದ ಡಾ.ಸಿದ್ದಲಿಂಗ ಸ್ವಾಮೀಜಿ: ಸಿಂದಗಿಯಲ್ಲಿ ಜನಿಸಿ ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿಯಾಗಿ ಅಸಾಮಾನ್ಯ ಸಾಮಾಜಿಕ ಸೇವೆ ಮಾಡಿದ್ದಾರೆ. ಪುಸ್ತಕದ ಸ್ವಾಮಿಗಳಾಗಿ ಗೋಕಾಕ ಚಳುವಳಿಯನ್ನು ಸಿಂದಗಿಯ ನೆಲೆದಿಂದ ಪ್ರಾರಂಭಿಸಿದವರು.
ರೇ.ಚ.ರೇವಡಿಗಾರ: ಸಿಂದಗಿ ಪತ್ರಿಕಾರಂಗದ ಭೀಷ್ಮ, ಗೋಕಾಕ ಚಳುವಳಿಯ ಹೋರಾಟದಲ್ಲಿ ಭಾಗಿಯಾದವರು. ಪತ್ರಕರ್ತನಾಗಿ ತಮ್ಮ ಲೇಖನಗಳ ಮೂಲಕ ಸಮಾಜವನ್ನು ತಿದ್ದಿದವರು.ಡಾ.ಎಮ್.ಎಮ್.ಕಲಬುರ್ಗಿ: ಯರಗಲ್ಲ ಗ್ರಾಮದ ಡಾ.ಎಮ್.ಎಮ್.ಕಲಬುರ್ಗಿ ಅವರು ಸಂಶೋಧನಾ ಮಾರ್ಗದರ್ಶಕರು. ಕನ್ನಡ ಸಂಸ್ಕೃತಿಯ ಸಮಗ್ರ ಸಂಶೋಧಕರಾಗಿ ಕಾರ್ಯನಿರ್ವಹಿಸಿದವರು. ಅವರು ಸಂಶೋಧನೆಗಳ ಮೂಲಕ ಅನೇಕ ವಿಚಾರಗಳನ್ನು ಸಾಬಿತು ಪಡಿಸಿದ್ದಾರೆ.
ಮಾಜಿ ಸಚಿವ ಎಂ.ಸಿ.ಮನಗೂಳಿ: ಶಾಸಕರಾಗಿ, ಸಚಿವರಾಗಿ ಸಿಂದಗಿ ಅಭಿವೃದ್ದಿಗೆ ಶ್ರಮಿಸಿದವರು. ಬರಗಾಲದ ಬವಣೆಗೆ ಸಿಕ್ಕ ಸಿಂದಗಿ ಕ್ಷೇತ್ರವನ್ನು ನೀರಾವರಿ ಕ್ಷೇತ್ರ ಮಾಡಿದವರು. ಸಿಂದಗಿ ಕೆರೆಗೆ ನೀರು ಹರಿಸಿ ಆಧುನೀಕ ಭಗೀರಥರಾದರು. 2018ರಲ್ಲಿ ಸಚಿವರಾಗಿ ಶಾಶ್ವತ ಯೋಜನೆ ರೂಪಿಸಿದವರು. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸಿ ಜನಮಾನಸದಲ್ಲಿ ಉಳಿದಿದ್ದಾರೆ.ಸ್ವಾಮಿ ರಮಾನಂದ ತೀರ್ಥರು: ಮೂಲ ಸಿಂದಗಿಯವರು ಶಿಕ್ಷಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1948ರಲ್ಲಿ ಹೈದ್ರಾಬಾದ ವಿಮೋಚನಾ ಚಳುವಳಿಯ ನಾಯಕತ್ವವಹಿಸಿದ್ದರು.ಇವರ ಹೆಸರಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ.
ಡಾ.ಎಸ್.ಜಿ.ಬಮ್ಮಣ್ಣಿ: ಇವರು ಸಾಮಾಜಿಕ ಹೋರಾಟಗಾರನಾಗಿ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಪುರಸಭೆ ಅಧ್ಯಕ್ಷರಾಗಿ, ಬಸವ ಸಮಿತಿ ಕಾರ್ಯಾಧ್ಯಕ್ಷರಾಗಿ, ಸಿಂದಗಿ ಪರಿಸರದಲ್ಲಿ ಬಸವ ಪ್ರಜ್ಞೆ ಬೆಳೆಸಿದವರು.-----
ಕೋಟ್ಸಿಂದಗಿ ನಗರವನ್ನು ಮಾದರಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇನ್ನು ಕೆಲವು ದೊಡ್ಡ ಕೆಲಸಗಳು ಬಾಕಿ ಇವೆ. ಅವುಗಳನ್ನು ಹಂತ ತಂತವಾಗಿ ನಿರ್ಮಾಣ ಮಡುವೆ. ಸಿಂದಗಿಯ ಸಾಧಕರು ನಮಗೆಲ್ಲ ಮಾರ್ಗದರ್ಶಕರು. ಅವರ ಹೆಸರನ್ನು ನಿತ್ಯ ಸ್ಮರಿಸಬೇಕು ಎಂಬ ಉದ್ದೇಶದಿಂದ ಪುರಸಭೆ ಈ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ. ಇನ್ನು ಹೆಚ್ಚಿನ ಅಭಿವೃದ್ಧಿ ಪರವಾದ ಯೋಜನೆಗಳನ್ನು ತಂದು ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಮಾಡುತ್ತೇನೆ.
ಅಶೋಕ ಮನಗೂಳಿ, ಶಾಸಕರುಸಿಂದಗಿಯನ್ನು ಬೆಳಗಿದ ಸಾಧಕರ ಹೆಸರನ್ನು ರಸ್ತೆಗಳಿಗಿಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಅದು ಇಗ ಕೈಗೂಡಿದೆ. ಇನ್ನಷ್ಟು ಸಾಧಕರ ಮಾಹಿತಿ ಪಡೆದು ಉಳಿದ ರಸ್ತೆಗಳಿಗೆ ಇಡಲು ಪುರಸಭೆ ಸಿದ್ದವಿದೆ. ಸಿಂದಗಿ ನಗರ ಸೌಂದರ್ಯಿಕರಣಕ್ಕಾಗಿ ಪುರಸಭೆಯಿಂದ ಇನ್ನು ಅನೇಕ ಕಾರ್ಯಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಎಲ್ಲ ಯೋಜನೆಗಳನ್ನು ಈಡೇರಿಸುತ್ತೇವೆ.ಡಾ.ಶಾಂತವೀರ ಮನಗೂಳಿ, ಪುರಸಭೆ ಅಧ್ಯಕ್ಷರು