ಗೋಕರ್ಣ: ನಮ್ಮ ಸನಾತನ ಧರ್ಮದ ಆಚಾರ, ಸಂಸ್ಕೃತಿಯ ಉಳಿವು ಹಾಗೂ ಭಾರತೀಯರು ಆರಾಧಿಸುವ ಗೋಮಾತೆ ರಕ್ಷಣೆ, ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ಒತ್ತಾಯಿಸುವ ಸಂದೇಶ ಹೊತ್ತು ಉದ್ದಂಡ ನಮಸ್ಕಾರ ಮಾಡುತ್ತಾ ದೇಶ ಪರ್ಯಟನೆಗೆ ಹೊರಟ ಉತ್ತರ ಪ್ರದೇಶದ ಬರೇಲಿಯ ನರೇಶ ಗಂಗಾವರ್ ಮಹಾರಾಜ್ ಅವರು ಮಂಗಳವಾರ ಇಲ್ಲಿಗೆ ಆಗಮಿಸಿ ಎಲ್ಲರ ಗಮನ ಸೆಳೆದರು. ಉತ್ತರ ಪ್ರದೇಶದ ನರೇಶ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಯುವ ಜನತೆಗೆ ದೇಶಾಭಿಮಾನ ಹೆಚ್ಚಿಸುವುದು, ನಮ್ಮ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ ಕುರಿತು ತಿಳಿವಳಿಗೆ ನೀಡಿ, ಗೋಮಾತೆಯ ರಕ್ಷಣೆಗೂ ಕರೆ ನೀಡುವ ಉದ್ದೇಶದಿಂದ 2023ರ ಮೇ ೧ರಿಂದ ಪತ್ನಿ, ಓರ್ವ ಮಗನ ಜತೆ ಯಾತ್ರೆ ಆರಂಭಿಸಿದ್ದು, ಉತ್ತರಾಖಾಂಡ್, ವಾರಣಾಸಿ, ಹರಿಯಾಣ, ರಾಜಸ್ತಾನ, ಹಿಮಾಚಲ ಪ್ರದೇಶ, ಜಮ್ಮು, ಕಾಶ್ಮಿರ, ಗುಜರಾತ್ ಸೇರಿದಂತೆ ಉತ್ತರಭಾರತದ ಎಲ್ಲ ರಾಜ್ಯ ಭೇಟಿ ಮಾಡಿ ಮಹಾರಾಷ್ಟ್ರದ ಮೂಲಕ ಕರ್ನಾಟಕಕ್ಕೆ ಬಂದಿದ್ದಾರೆ. ಒಟ್ಟು ಮೂವತ್ತು ಸಾವಿರ ಕಿಮೀ ದೂರ ಕ್ರಮಿಸುವ ಉದ್ದೇಶ ಹೊಂದಿರುವ ಇವರು, ಪ್ರಸ್ತುತ ಹತ್ತು ಸಾವಿರಕ್ಕೂ ಹೆಚ್ಚು ದೂರದ ಪ್ರಯಾಣ ಮುಗಿಸಿದ್ದಾರೆ. ನರೇಶ ಮಹಾರಾಜ ಅವರು ಕಳೆದ ಹಲವು ವರ್ಷಗಳಿಂದ ಹೊರಗಡೆ ಊಟ ಮಾಡದೇ ಸ್ವತಃ ಅಡುಗೆ ತಯಾರಿಸಿಕೊಳ್ಳುತ್ತಿದ್ದಾರೆ. ಆಹಾರ ತಯಾರಿಕೆಗೆ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಲು ತ್ರಿಚಕ್ರ ಸೈಕಲ್ ಬಳಸುತ್ತಿದ್ದು, ಇದಕ್ಕೆ ಯಾತ್ರೆಯ ಉದ್ದೇಶದ ಬ್ಯಾನರ್ ಹಾಕಿಕೊಂಡಿದ್ದು, ಇದು ಗಮನ ಸೆಳೆಯುತ್ತಿದೆ.

ಇದರ ಜತೆ ಶಕ್ತಿ ಮಾತೆಯ ಮೂರ್ತಿಯನ್ನು ಜತೆ ಇಟ್ಟುಕೊಂಡು ಆರಾಧಿಸುತ್ತಾ ತೆರಳುತ್ತಾರೆ. ಗೋಕರ್ಣದಲ್ಲಿ ಒಂದು ದಿನ ಉಳಿದು ನಂತರ ಕೊಲ್ಲೂರು ಹಾಗೂ ಕರ್ನಾಟಕದ ವಿವಿದೆಡೆ ತೆರಳಿ ಬಳಿಕ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರತಿದಿನ ೭ರಿಂದ ೮ ಕಿಮೀ ದಂಡ ನಮಸ್ಕಾರ ಹಾಕಿ ಸಾಗುತ್ತಾರೆ. ಛತ್ರ, ದೇವಾಲಯದಲ್ಲಿ ಉಳಿಯುವ ಇವರು ಒಂದೇ ಹೊತ್ತಿನ ಊಟ ಮಾಡುವುದು, ಯಾರಿಂದಲೂ ಹಣ ಪಡೆಯದೆ ತೆರಳುವುದು ಇವರ ವಿಶೇಷತೆಯಾಗಿದೆ. ಊರಿನಲ್ಲಿ ಶಾಲೆಯನ್ನು ಸಹ ನಡೆಸುತ್ತಿರುವ ಇವರು ಮತ್ತೊಂದು ಮಗ ಊರಿನಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದಾರೆ.