ಕಾಮಗಾರಿಗೆ ನಡೆಸದಿದ್ದರೂ ಕಾಮಗಾರಿ ಬಿಲ್ ಪಾವತಿ ಮಾಡಿದ್ದಾರೆಂದು ನಗರದ ನಗರಸಭೆ ಹಿಂದಿನ ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ದೂರಿನ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿ ತಮಗೆ ಮಾಹಿತಿ ನೀಡದೇ ಸ್ಥಳ ಪರಿಶೀಲನೆ ಮಾಡಿದ್ದಾರೆಂದು ದೂರುದಾರ ಮೊಹಮ್ಮದ್ ಮಜಹರ್ ಆರೋಪಿಸಿದ್ದಾರೆ.

- ಕಾಮಗಾರಿ ಮಾಡದೇ ಬಿಲ್‌ ಪಾವತಿ: ದೂರುದಾರ

- - -

- ವಿದ್ಯಾದಾಯಿನಿ ಶಾಲೆ ಹತ್ತಿರ ಸಿಸಿ ಚರಂಡಿ ನಿರ್ಮಾಣ ಮುಂದುವರಿದ ಕಾಮಗಾರಿ ನಡೆಸಿಲ್ಲ.

- ನಾನು ಆರೋಪಿಸಿದ್ದ ಸ್ಥಳಕ್ಕೆ ಆಗಮಿಸದೇ ಬೇರೆ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿದ ಅಧಿಕಾರಿ

- - -

ಕನ್ನಡಪ್ರಭ ವಾರ್ತೆ ಹರಿಹರ

ಕಾಮಗಾರಿಗೆ ನಡೆಸದಿದ್ದರೂ ಕಾಮಗಾರಿ ಬಿಲ್ ಪಾವತಿ ಮಾಡಿದ್ದಾರೆಂದು ನಗರದ ನಗರಸಭೆ ಹಿಂದಿನ ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ದೂರಿನ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿ ತಮಗೆ ಮಾಹಿತಿ ನೀಡದೇ ಸ್ಥಳ ಪರಿಶೀಲನೆ ಮಾಡಿದ್ದಾರೆಂದು ದೂರುದಾರ ಮೊಹಮ್ಮದ್ ಮಜಹರ್ ಆರೋಪಿಸಿದ್ದಾರೆ.

ನಗರದ ೫ನೇ ವಾರ್ಡಿನ ವ್ಯಾಪ್ತಿಯ ವಿದ್ಯಾದಾಯಿನಿ ಶಾಲೆ ಹತ್ತಿರ ಸಿಸಿ ಚರಂಡಿ ನಿರ್ಮಾಣ ಮುಂದುವರಿದ ಕಾಮಗಾರಿಯನ್ನು ನಡೆಸಿಲ್ಲ. ಆದರೂ, ₹೪.೪೧ ಲಕ್ಷ ಮೊತ್ತವನ್ನು ಜುಲೈ 2021ರ ೯ರಂದು ಗುತ್ತಿಗೆದಾರನಿಗೆ ಪಾವತಿಸಿದ್ದಾರೆ. ಈ ಕುರಿತು 2023ರ ಜುಲೈ ೧ರಂದು ಗುತ್ತಿಗೆದಾರರೂ ಆಗಿರುವ ಮೊಹಮ್ಮದ್ ಮಜಹರ್ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಪರಿಶೀಲನೆಗೆಂದು ಡಿ.೧೫ರಿಂದ ೧೭ ರವರೆಗೆ ಹರಿಹರದಲ್ಲಿ ಸ್ಥಳ ಮತ್ತು ದಾಖಲೆಗಳ ತನಿಖೆಗೆ ಹರಿಹರ ನಗರಸಭೆಗೆ ಆಗಮಿಸುವುದಾಗಿ ಲೋಕಾಯುಕ್ತ ಕಚೇರಿ ತನಿಖಾಧಿಕಾರಿ ಆಗಿರುವ ಕೆ.ಬಿ.ಗಾಯತ್ರಿ ಎಂಬವರು ದೂರುದಾರರಿಗೆ ಅಂಚೆ ಮೂಲಕ ಪತ್ರ ಕಳಿಸಿದ್ದರು. ತನಿಖಾ ಸಮಯದಲ್ಲಿ ತಾವು ಖುದ್ದು ಹಾಜರಿದ್ದು ತನಿಖೆಗೆ ಸಹಕರಿಸಬೇಕೆಂದು ಪತ್ರದಲ್ಲಿ ಹಾಗೂ ೧೫ ದಿನಗಳ ಹಿಂದೆ ಫೋನ್ ಮೂಲಕವೂ ತನಿಖಾಧಿಕಾರಿ ನನಗೆ ತಿಳಿಸಿದ್ದರು. ಡಿ.೧೬ರಂದು ಬೆಳಗ್ಗೆ ಹರಿಹರ ನಗರಸಭೆಗೆ ಆಗಮಿಸಿದ್ದಾಗ ತನಿಖಾಧಿಕಾರಿಯನ್ನು ಭೇಟಿ ಮಾಡಿ ದೂರಿನ ಬಗ್ಗೆ ಚರ್ಚಿಸಿದ್ದೆ. ಅನಂತರ ಸ್ಥಳಕ್ಕೆ ಹೋಗೋಣ ಎಂದು ತನಿಖಾಧಿಕಾರಿ ಹಾಗೂ ಆರೋಪಿತರು ಕಾರಿನಲ್ಲಿ ತೆರಳಿದರು. ನಾನು ಬೈಕ್‌ನಲ್ಲಿ ಸ್ಥಳಕ್ಕೆ ತೆರಳಿದೆ. ಆದರೆ ಅಧಿಕಾರಿಯು ನಾನು ಆರೋಪ ಮಾಡಿದ್ದ ಸ್ಥಳಕ್ಕೆ ಆಗಮಿಸದೇ ಬೇರೆ ಸ್ಥಳಕ್ಕೆ ಹೋಗಿರುವ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ, ಹಲವು ಬಾರಿ ಫೋನ್ ಮಾಡಿದರೂ ತನಿಖಾಧಿಕಾರಿ ಕರೆ ಸ್ವೀಕರಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಸ್ಥಳ ಪರಿಶೀಲನೆಗೆ ತೆರಳುವ ಮುನ್ನವೇ ನಗರಸಭೆ ಕಚೇರಿಯಲ್ಲಿ ಆರೋಪಿತರಾದ ಹಿಂದಿನ ಎಇಇ ಎಸ್.ಎಸ್.ಬಿರಾದರ್, ಎಇ ಅಬ್ದುಲ್ ಹಮೀದ್ ಹಾಗೂ ಈಗಿನ ಎಇಇ ವಿನಯ್ ಕುಮಾರ್ ಅವರು ವರದಿಯೊಂದು ಬರೆದಿದ್ದ ಹಾಳೆಯ ಮೇಲೆ ನನ್ನ ಸಹಿ ಹಾಕಿಸಿಕೊಂಡಿದ್ದಾರೆ. ಸ್ಥಳ ಪರಿಶೀಲನೆಯ ನಂತರ ಸಹಿ ಹಾಕಿಸಿಕೊಳ್ಳುವ ಬದಲು ಮುಂಚೆಯೇ ಸಹಿ ಹಾಕಿಸಿಕೊಂಡಿರುವುದು ಹಾಗೂ ಬೇಕಂತಲೇ ದೂರಿನಲ್ಲಿ ಕಾಣಿಸಿದ ವಿದ್ಯಾದಾಯಿನಿ ಶಾಲೆ ಸಮೀಪ ಸ್ಥಳ ಪರಿಶೀಲನೆ ನಡೆಸದಿರುವುದು ನೋಡಿದರೆ ಲೋಕಾಯುಕ್ತ ತನಿಖಾಧಿಕಾರಿಯೇ ಆರೋಪಿತರ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡುವುದಾಗಿ ಮೊಹಮ್ಮದ್‌ ಮಜಹರ್‌ ತಿಳಿಸಿದ್ದಾರೆ.

- - -