ಬಳ್ಳಾರಿ: ಮಹಿಳಾ ಮೀಸಲಾತಿ ಮಸೂದೆ ಜಾರಿ ವಿರೋಧಿಸುವ ಮೂಲಕ ಕಾಂಗ್ರೆಸ್ ಮಹಿಳಾ ಸಮುದಾಯಕ್ಕೆ ಅವಮಾನ ಎಸಗಿದೆ ಎಂದು ಆರೋಪಿಸಿ ಜೆಡಿಎಸ್‌ನ ಮಹಿಳಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಗಡಗಿಚನ್ನಪ್ಪ ವೃತ್ತಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ ಪಕ್ಷದ ನೂರಾರು ಮಹಿಳೆಯರು ಪ್ರತಿಭಟನಾ ಧರಣಿ ನಡೆಸಿ, ಕಾಂಗ್ರೆಸ್ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.ಮಹಿಳಾ ವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್ ಇದೀಗ ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ವಿರೋಧಿಸುವ ಮೂಲಕ ತನ್ನ ನೀಚ ಸಂಸ್ಕೃತಿ ಪ್ರದರ್ಶಿಸಿದೆ. ಪ್ರಜಾಪ್ರಭುತ್ವ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದೆ.
ಪುರುಷರಷ್ಟೇ ಮಹಿಳೆಯರೂ ಸಬಲರು. ಜನಸಂಖ್ಯೆಯಲ್ಲೂ ಸುಮಾರು ಶೇ 50ರಷ್ಟು ಇರುವ ಮಹಿಳೆಯರಿಗೂ ಸಮಪಾಲು ಸಿಗಬೇಕು. ಆದರೆ, ಮಸೂದೆ ಜಾರಿಗೆ ವಿರೋಧಿಸುತ್ತಿರುವುದು ಖಂಡನೀಯ. ಮಹಿಳೆಯರು ಜಾಗೃತರಾಗಿ ಕಾಂಗ್ರೆಸ್ ವಿರುದ್ಧ ತಿರುಗಿಬೀಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಜೆಡಿಎಸ್ ಪಕ್ಷವು ದೇವೇಗೌಡ ಹಾಗೂ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ಮಹಿಳೆಯೇ ಜೆಡಿಎಸ್ ಪಕ್ಷದ ಚಿಹ್ನೆ. ಆದರೆ, ಮಹಿಳೆಯರನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್‌ನ ಸಿದ್ಧಾಂತವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಏಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪ್ರಶ್ನಿಸಿದರು.
ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಜರುಗಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ಮಹಿಳಾ ಸಬಲೀಕರಣ ಮಾಡುವುದಾದರೆ ರಾಜಕೀಯದಲ್ಲಿ ಅವಕಾಶ ಕೊಡಬೇಕು. ಆದರೆ, ಕಾಂಗ್ರೆಸ್‌ನಿಂದ ಮಹಿಳೆಯರಿಗೆ ಅನ್ಯಾಯ ಎಸಲಾಗುತ್ತಿದೆ. ಮಸೂದೆ ಸೋಲಿಸಿರುವ ಕಾಂಗ್ರೆಸ್ ನೀತಿಯನ್ನು ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾ, ಜಿಲ್ಲಾ ಪ್ರಮುಖರಾದ ಜಮೀಲಾ, ಶಬಾನಾ, ವಸಂತಮ್ಮ, ವರಲಕ್ಷ್ಮೀ, ರಾಜೇಶ್ವರಿ, ಶಿವಗಂಗಾ, ತಮೀಮ್ ಸೇರಿದಂತೆ ಪಕ್ಷದ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.