ಬಸವರಾಜ ಹಿರೇಮಠ

ಧಾರವಾಡ:

ಬೆಂಗಳೂರು ಕೇಂದ್ರಿತ ಆಡಳಿತ ವ್ಯವಸ್ಥೆಯಿಂದ ಈಗಾಗಲೇ ಉತ್ತರ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನ್ಯಾಯಗಳಾಗಿವೆ. ಈ ಭಾಗದ ಅಸ್ಮಿತೆಯಾಗಿರುವ ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರ ಈ ಭಾಗದ ಜನರಿಗೆ ಸಹಿಸಲಾಗದ ಹೊಸ ಅನ್ಯಾಯಗಳಲ್ಲೊಂದು.

ಅನವಶ್ಯಕ ಸ್ಥಳಾಂತರ ಏಕೆ?:

ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಸದೃಢವಾಗಿ ಕಾರ್ಯ ನಿರ್ವಹಿಸುವಾಗ ಅದನ್ನು ಮತ್ತಷ್ಟು ಬಲಗೊಳಿಸಬೇಕೆ ಹೊರತು, ಅನವಶ್ಯಕ ಕಾರಣಗಳನ್ನೊಡ್ಡಿ ಅಶಕ್ತಗೊಳಿಸಿ, ಸ್ಥಳಾಂತರಿಸುವ ನಿರ್ಧಾರ ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಹಿಂದೆ 2020 ಹಾಗೂ 2023ರಲ್ಲೂ ಇದೇ ತರನಾದ ಆದೇಶಗಳು ಈ ಭಾಗದ ಜನರನ್ನು ಬಡಿದೆಬ್ಬಿಸಿದ ಹಿನ್ನೆಲೆಯಲ್ಲಿ ಸ್ಥಳಾಂತರದ ನಿರ್ಧಾರ ಕೈ ಬಿಡಲಾಗಿತ್ತು. ಇದೀಗ ಮತ್ತೆ ಸ್ಥಳಾಂತರದ ಆದೇಶ ಬಂದಿದ್ದು, ಪ್ರಸಾರ ಭಾರತಿಯು ಈ ನಿರ್ಧಾರ ಕೈ ಬಿಡದೇ ಇದ್ದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೂ ಇಲ್ಲಿಯ ಜನರು ಸಿದ್ಧರಾಗಿದ್ದಾರೆ.


45 ವರ್ಷಗಳ ಇತಿಹಾಸ:

ಸ್ವಾತಂತ್ರ್ಯ ದೊರೆತ ನಂತರ 1950ರಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾನುಲಿ ಕೇಂದ್ರ ಧಾರವಾಡದಲ್ಲಿ ಶುರುವಾಯಿತು. ಅಂತೆಯೇ, 1981ರಲ್ಲಿ ಪ್ರಾದೇಶಿಕ ಸುದ್ದಿ ವಿಭಾಗ ಕಾರ್ಯಾರಂಭ ಮಾಡಿತು. ಸದ್ಯ ಬೆಂಗಳೂರು ಹಾಗೂ ಧಾರವಾಡದಲ್ಲಿ ಎರಡು ಪ್ರಾದೇಶಿಕ ಸುದ್ದಿ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಖಾದ್ರಿ ಎಸ್‌ ಅಚ್ಯುತನ್‌, ಕೆ.ಆರ್‌. ಪ್ರಹ್ಲಾದ, ಸತ್ಯನಾರಾಯಣ, ಡಾ. ಶಿವರಾಮ ಪೈಲೂರು, ಡಾ. ಡಿ.ಜಿ. ಹಳ್ಳಿಕೇರಿ, ಇಂತಹ ಮಹಾನ್‌ ವ್ಯಕ್ತಿಗಳು ಸುದ್ದಿ ಸಂಪಾದಕರಾಗಿ ಧಾರವಾಡದ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜತೆಗೆ ನಾಗೇಶ ಶಾನಭಾಗ, ಚಾಮರಾಜ, ಎಸ್‌. ಪರಿಶಿವಮೂರ್ತಿ ಎಂಬ ಘಟಾನುಘಟಿಗಳು ಪ್ರದೇಶ ಸಮಾಚಾರ ಓದಿದ ವಿಭಾಗವಿದು.

ಈ ವಿಭಾಗದ ಮಹತ್ವ ಏನು?:

ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ 15 ಜಿಲ್ಲೆಗಳ ಮಹತ್ವದ ಸುದ್ದಿ ಪ್ರಸಾರ ಕೇಂದ್ರವಿದು. ಈ ವಿಭಾಗದಿಂದ ಪ್ರಸಾರ ಆಗುವ ಬೆಳಗಿನ 7.5ರ ಪ್ರದೇಶ ಸಮಾಚಾರವನ್ನು 5.5 ಕೋಟಿ ಜನರು ಕೇಳುತ್ತಾರೆ ಎಂಬುದನ್ನು ಶ್ರೋತೃ ಸಂಶೋಧನಾ ವಿಭಾಗ ಮಾಡಿದ ಸಮೀಕ್ಷೆಯಲ್ಲಿಯೇ ಬಹಿರಂಗವಾಗಿದೆ. ಈ ಸಮಾಚಾರವು ಸ್ಥಳೀಯ ಸೊಗಡು, ಭಾಷೆ, ಸಂಸ್ಕೃತಿ ಹೊಂದಿದೆ. ಅಭಿವೃದ್ಧಿಪರ, ರೈತಪರ, ಮಹಿಳೆ, ಮಕ್ಕಳ ಪರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಭಾಗದ ಸ್ಥಳಾಂತರ ಈ ಭಾಗದ ಜನರನ್ನು ಕೆರಳಿಸಿದೆ.

ವಿಶ್ವಾಸ ಉಳಿಸಿಕೊಂಡ ವಿಭಾಗ:

ಬೆಂಗಳೂರು ವಿಭಾಗಕ್ಕಿಂತ ಹೆಚ್ಚಿನ ಆಗು-ಹೋಗುಗಳು ಉತ್ತರ ಕರ್ನಾಟಕ ಭಾಗದಲ್ಲಾಗುತ್ತವೆ. ಆಧುನಿಕ ಯುಗದಲ್ಲೂ ಅತ್ಯಂತ ತುರ್ತಾಗಿ, ಸುದ್ದಿ ಮೌಲ್ಯ ಉಳಿಸಿಕೊಂಡು ಈ ವಿಭಾಗವು ಸುದ್ದಿ ಕೊಡುತ್ತಿದೆ. ಅಂತೆಯೇ ಕೇಳುಗರ ವಿಶ್ವಾಸ ಉಳಿಸಿಕೊಂಡಿದೆ. ಇಂತಹ ವಿಭಾಗದಲ್ಲಿ ಇಬ್ಬರು ಗುತ್ತಿಗೆ ಆಧಾರದ ಸಿಬ್ಬಂದಿ, ಮೂವರು ಅರೆ ಕಾಲಿಕ ಸಿಬ್ಬಂದಿ ಹಾಗೂ ಇಬ್ಬರು ಡಿಡಿಪಿ ಆಪರೇಟರ್‌ಗಳಿದ್ದಾರೆ. ಈ ವಿಭಾಗವನ್ನು ಪೂರ್ಣ ಪ್ರಮಾಣದ ಸುದ್ದಿ ವಿಭಾಗವನ್ನಾಗಿ ಮಾಡಿ, ವಿಭಾಗ ಮುನ್ನಡೆಸಲು ಓರ್ವ ಸಹಾಯಕ ನಿರ್ದೇಶಕ ಮತ್ತು ಈ ಭಾಗದ ಆಗು-ಹೋಗುಗಳ ಭಾತ್ಮೀದಾರ ಮತ್ತು ಮಹತ್ವದ ಸ್ಥಳಗಳಾದ ಬೀದರ, ಕಲಬುರ್ಗಿ, ಧಾರವಾಡ -ಹುಬ್ಬಳ್ಳಿ, ಬಳ್ಳಾರಿ-ಕೊಪ್ಪಳ ಪೂರ್ಣ ಪ್ರಮಾಣದ ಭಾತ್ಮೀದಾರರು ಅಗತ್ಯವಿದೆ ಎನ್ನವುದು ಆಕಾಶವಾಣಿ ನಿವೃತ್ತ ಅಧಿಕಾರಿಗಳ ಆಗ್ರಹ.

ದುರಂತ ಎಂದರೆ, 45 ವರ್ಷಗಳಲ್ಲಿ ಈ ವರೆಗೆ ಸುಮಾರು ಆಗಾಗ 12 -14 ವರ್ಷ ಮಾತ್ರ ಅಧಿಕಾರಿಗಳು ಇದ್ದಾರೆ ಎನ್ನುವುದು ಬಿಟ್ಟರೆ, ಬಹುತೇಕ ಸಂದರ್ಭಗಳಲ್ಲಿ ಅಧಿಕಾರಿಗಳಿಲ್ಲದೆಯೇ ಸುಸೂತ್ರವಾಗಿ, ಸದೃಢವಾಗಿ, ಯಾವುದೇ ದೂರುಗಳು ಬರದಂತೆ ಅತ್ಯಂತ ಯಶಸ್ವಿಯಾಗಿ ಗುತ್ತಿಗೆ ಆಧಾರಿತ ಮತ್ತು ಆರೆಕಾಲಿಕ ಸುದ್ದಿ ಸಂಪಾದಕರು ಹಾಗೂ ಸುದ್ದಿ ಓದುಗರು ಈ ವಿಭಾಗ ನಡೆಸಿಕೊಂಡು ಬಂದಿದ್ದಾರೆ ಎನ್ನುವುದು ವಿಭಾಗದ ಹೆಮ್ಮೆ.

ಕೇರಳಂ ಕರ್ನಾಟಕದ ಒಂದನೇ ಐದರಷ್ಟು ಪ್ರಾದೇಶಿಕತೆ ಹೊಂದಿದೆ. ಅಲ್ಲಿಯ ಜನಸಂಖ್ಯೆ ಒಟ್ಟು ಕರ್ನಾಟಕದ ಅರ್ಧಕ್ಕಿಂತ ಕಡಿಮೆ ಇದೆ. ಇಷ್ಟಾಗಿ ಅಲ್ಲಿ ತಿರುವನಂತಪುರ ಹಾಗೂ ಕೋಝಿಕೋಡ್‌ ಎಂಬಲ್ಲಿ ಎರಡು ಪ್ರಾದೇಶಿಕ ಸುದ್ದಿ ವಿಭಾಗಗಳಿವೆ. ಈ ಹಿನ್ನೆಲೆಯಲ್ಲಿ ಬೀದರ್‌ ಅಥವಾ ಕಲಬುರ್ಗಿಯಲ್ಲಿ ಒಂದು ಹಾಗೂ ಮಂಗಳೂರು ಅಥವಾ ಉಡುಪಿಯಲ್ಲಿ ಮತ್ತೊಂದು ಸೇರಿ ಕರ್ನಾಟಕದಲ್ಲಿ ಒಟ್ಟು ನಾಲ್ಕು ಪ್ರಾದೇಶಿಕ ಸುದ್ದಿ ವಿಭಾಗಗಳ ಅಗತ್ಯತೆ ಇದೆ. ಇಂತಹ ಸಂದರ್ಭದಲ್ಲಿ ಧಾರವಾಡದ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ಯಾವ ನ್ಯಾಯ?. ಧಾರವಾಡ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರದ ಆದೇಶದ ಬಗ್ಗೆ ತಮಗೂ ಮಾಹಿತಿ ಬಂದಿದ್ದು, ಬೇಸರ ತರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಸ್ಥಳಾಂತರ ಆಗದಂತೆ ನೋಡಿಕೊಳ್ಳುತ್ತೇವೆ.

ಅರವಿಂದ ಬೆಲ್ಲದ, ಶಾಸಕರು, ಹು-ಧಾ ಪಶ್ಚಿಮಧಾರವಾಡ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರದ ಆದೇಶದ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸ್ಥಳಾಂತರ ವಿರೋಧಿಸಿ ಸಭೆ ನಡೆಯಿತು. ಕೇಂದ್ರದ ಈ ನಿರ್ಧಾರ ಖಂಡಿಸಿ ವಿದ್ಯಾವರ್ಧಕ ಸಂಘದ ಮುಂದಾಳತ್ವದಲ್ಲಿ ಸಾಹಿತ್ಯ ಪರಿಷತ್ತು, ನವ ನಿರ್ಮಾಣ ವೇದಿಕೆ ಸೇರಿದಂತೆ ಆಕಾಶವಾಣಿ ಕೇಳುಗರು ಹಾಗೂ ಹೋರಾಟಗಾರರು ಆಕಾಶವಾಣಿ ವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಒಂದು ದಿನ ಸಾಂಕೇತಿಕವಾಗಿ ಪ್ರತಿಭಟನೆ ಮಾಡುವುದು. ಜತೆಗೆ ಧಾರವಾಡ ಆಕಾಶವಾಣಿ ವ್ಯಾಪ್ತಿ 15 ಜಿಲ್ಲೆಗಳ ಶಾಸಕರು ಹಾಗೂ ಸಂಸದರಿಗೆ ಈ ಸ್ಥಳಾಂತರ ಆದೇಶ ರದ್ದು ಮಾಡಿ ಶಾಶ್ವತವಾಗಿ ಪ್ರಾದೇಶಿಕ ಸುದ್ದಿ ವಿಭಾಗವು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿಯೇ ಉಳಿದುಕೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಪತ್ರ ಬರೆಯಲು ತೀರ್ಮಾನಿಸಲಾಯಿತು.