ಬಳ್ಳಾರಿ: ದೆಹಲಿಯ ಜಂತರ್ ಮಂತರ್ ನಲ್ಲಿ ಸೋನಂ ವಾಂಗ್ಚುಕ್ ಮತ್ತು ಇತರೆ ಉಪವಾಸನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಪೊಲೀಸರ ಕ್ರಮವನ್ನು ಖಂಡಿಸಿ ನಗರದಲ್ಲಿ ಎಐಎಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ಜರುಗಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ರದ್ದತಿ, ಅದರ ನಂತರದ ವಿವಾದಗಳು ಮತ್ತು ತೀವ್ರವಾದ ಮಾನಸಿಕ ಒತ್ತಡದಿಂದಾಗಿ ಈಗಾಗಲೇ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸಂಖ್ಯಾತ ವಿದ್ಯಾರ್ಥಿಗಳು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಈ ವ್ಯವಸ್ಥಿತ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ಮೌನದ ವಿರುದ್ಧ ಪ್ರತಿಭಟಿಸಿ, ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಮತ್ತು ಇತರ ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯವು ತೀವ್ರವಾಗಿ ಕ್ಷೀಣಿಸುತ್ತಿದೆ ಎಂದು ವೈದ್ಯಕೀಯ ವರದಿಗಳು ಈಗ ಎಚ್ಚರಿಸುತ್ತಿವೆ. ಇಂದು ಬೆಳಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸನಿರತ ಹೋರಾಟಗಾರರನ್ನು ಎಳೆದುಕೊಂಡು ಹೋಗಿರುವ ಸರ್ಕಾರ ಹಾಗೂ ಪೊಲೀಸರ ಕ್ರಮ ಅತ್ಯಂತ ಖಂಡನೀಯವಾಗಿದ್ದು ಇದೊಂದು ಪ್ರಜಾತಾಂತ್ರಿಕ ಹೋರಾಟಕ್ಕೆ ಸರ್ಕಾರ ಮಾಡುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲ ನಡೆಯುತ್ತಿದ್ದರು ಕೇಂದ್ರ ಸರ್ಕಾರವು ಮೌನವಾಗಿ ಕೂತಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಎನ್‌ಟಿಎ ರದ್ದುಗೊಳಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯುತ ಪ್ರಜಾಪ್ರಭುತ್ವದ ಬೇಡಿಕೆಗಳನ್ನು ಸರ್ಕಾರವು ನಿರ್ಲಕ್ಷಿಸುತ್ತಲೇ ಇರುವುದರಿಂದ ಕೇಂದ್ರ ಸರ್ಕಾರವು ತನ್ನ ಮೌನವನ್ನು ಮುರಿದು, ಮುಂದಿನ ದುರಂತಗಳನ್ನು ತಡೆಯಲು ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಮತ್ತು ಇತರ ಎಲ್ಲಾ ಉಪವಾಸ ಸತ್ಯಾಗ್ರಹಿಗಳೊಂದಿಗೆ ಪ್ರಜಾಪ್ರಭುತ್ವ ಮಾದರಿಯ ಚರ್ಚೆಗಳನ್ನು ಪ್ರಾರಂಭಿಸಬೇಕು. ಈ ಕುರಿತು ತಕ್ಷಣವೇ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ, ಜಿಲ್ಲಾ ಉಪಾಧ್ಯಕ್ಷ ಶಾಂತಿ ಮತ್ತು ಜಿಲ್ಲಾ ಸದಸ್ಯರಾದ ಕಾಂತೇಶ್, ಸುಧಾಕರ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ದೆಹಲಿಯ ಜಂತರ್ ಮಂತರ್ ನಲ್ಲಿ ಸೋನಂ ವಾಂಗ್ಚುಕ್ ಮತ್ತು ಇತರೆ ಉಪವಾಸನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಪೊಲೀಸರ ಕ್ರಮವನ್ನು ಖಂಡಿಸಿ ಬಳ್ಳಾರಿಯಲ್ಲಿ ಶನಿವಾರ ಎಐಎಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.