ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿದ ಶಿಕ್ಷಕನ ವಿರುದ್ಧ ಪ್ರತಿಭಟನೆ

| Published : Nov 11 2025, 02:45 AM IST

ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿದ ಶಿಕ್ಷಕನ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಹೋದ್ಯೋಗಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೇಲೆ ಸುಳ್ಳು ಜಾತಿ ನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿದ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎ.ದಾಸಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಸಹೋದ್ಯೋಗಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೇಲೆ ಸುಳ್ಳು ಜಾತಿ ನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿದ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎ.ದಾಸಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಚಿಗಳ್ಳಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸೋಮವಾರ ಪ್ರತಿಭಟಿಸುವ ಮೂಲಕ ಮುಂಡಗೋಡ ತಹಸೀಲ್ದಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಚಿಗಳ್ಳಿ ಸರಕಾರಿ ಪ್ರೌಢಶಾಲೆ ಶಿಕ್ಷಕ ದಾಸಪ್ಪ ಅವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಮೂವರು ಮಹಿಳಾ ಶಿಕ್ಷಕಿಯರ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರಲ್ಲದೇ, ಶಾಲಾ ಸಿಬ್ಬಂದಿಯೊಂದಿಗೆ ಮತ್ತು ಶಾಲಾಭಿವೃದ್ದಿ ಸಮಿತಿ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಾರೆ. ಈ ಹಿಂದೆ ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕರಾಗಿದ್ದಾಗ ಶಾಲೆಯ ಕಂಪ್ಯೂಟರ್, ವಿಕಲಚೇತನ ಮಕ್ಕಳ ಹಣ, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ವಿಕೋ ಕ್ಲಬ್‌ಗೆ ಸರ್ಕಾರಿಂದ ಬಂದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸುವ ಶಾಲಾಭಿವೃದ್ಧಿ ಸಮಿತಿ ಹಾಗೂ ಸಹ ಶಿಕ್ಷಕರಿಗೆ ಬೆದರಿಕೆ ಹಾಗೂ ಮಾನಸಿಕ ಹಿಂಸೆ ನೀಡುತ್ತ ಬಂದಿದ್ದಾರೆ. ಇದರಿಂದ ಶಾಲಾ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಕಳೆದ ೪-೫ ವರ್ಷಗಳಿಂದ ಇವರು ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆಯಲ್ಲದೇ, ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಇದು ಮಕ್ಕಳ ವಾರ್ಷಿಕ ಪರೀಕ್ಷೆ ಪಲಿತಾಂಷದ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ಇಂತಹ ಶಿಕ್ಷಕರು ತಮ್ಮ ಊರಿನ ಶಾಲೆಗೆ ಬೇಡವೇ ಬೇಡ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ತಕ್ಷಣ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು. ಒಂದಾನು ವೇಳೆ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ಆಲದಕಟ್ಟಿ, ಉಪಾಧ್ಯಕ್ಷ ರಿಯಾಜ್ ಪಾಳೇದ, ತಿರುಪತಿ ವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಷ್ಣ ಹಿರೇಹಳ್ಳಿ, ಧುರೀಣ ಎಚ್.ಎಂ. ನಾಯ್ಕ, ಮೋಹನ ಲಾಡನವರ, ಮಾಲತೇಶ ತಳವಾರ, ಬಾಬುರಾಯ್ ಲಾಡನವರ, ಚನ್ನಯ್ಯ ಅಸುಂಡಿಮಠ, ಗಣಪತಿ ಲಾಡನವರ, ವಿನಯ ಸಂಗೂರಮಠ, ಗುಡ್ಡಪ್ಪ ಕಾತೂರ, ರಾಜು ಗುಬ್ಬಕ್ಕನವರ, ಗೌಸ ಮಖಾಂದಾರ ಮುಂತಾದವರಿದ್ದರು.ಮಾನಸಿಕ ಕಿರುಕುಳಕ್ಕೆ ಬೇಸತ್ತು ಡಿಡಿಪಿಐ ಮೊರೆ ಹೋದ ಮಹಿಳಾ ಶಿಕ್ಷಕರು:

ಮುಂಡಗೋಡ ತಾಲೂಕಿನ ಚಿಗಳ್ಳಿ ಸರಕಾರಿ ಪ್ರೌಢಶಾಲೆ ಶಿಕ್ಷಕ ಎ.ದಾಸಪ್ಪ, ಮಾನಸಿಕ ಹಿಂಸೆ ನೀಡುತ್ತಾರೆಂದು ಆರೋಪಿಸಿದ ಅದೇ ಶಾಲೆಯ ಮೂವರು ಮಹಿಳಾ ಶಿಕ್ಷಕಿಯರು ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರು ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.ದಾಸಪ್ಪನ ಕಿರುಕುಳ, ದೌರ್ಜನ್ಯಕ್ಕೆ ಬೇಸತ್ತ ಶಾಲೆಯ ಮುಖ್ಯ ಶಿಕ್ಷಕಿ ಯಲ್ಲುಬಾಯಿ ಪಾಟೀಲ, ಸಹ ಶಿಕ್ಷಕಿ ನಯನಾ ಬಂಡಾರಿ ಹಾಗೂ ದಿವ್ಯಾ ಗೋಪಾಲ ಎಂಬುವವರು ಶಿಕ್ಷಕ ದಾಸಪ್ಪ ನಿತ್ಯ ತಮಗೆ ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯ ಮಾಡುತ್ತಾರೆ. ತಮಗೆ ಸಂಬಂಧವಿಲ್ಲದ ವಿಷಯದಲ್ಲಿ ಕೂಡ ಹಸ್ತಕ್ಷೇಪ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾರೆ. ವಿದ್ಯಾರ್ಥಿಗಳ ಎದುರೇ ತಮಗೆ ಏಕವಚನದಲ್ಲಿ ನಿಂದಿಸಿ ಅವಮಾನ ಮಾಡುತ್ತಾರೆ. ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಗುಂಪುಗಾರಿಕೆ ಮಾಡಿ ಪರಸ್ಪರ ಭಿನ್ನಾಭಿಪ್ರಾಯ ಬರುವಂತೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆ ಪ್ರಗತಿ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿ ಮುಕ್ತ ಮನಸ್ಸಿನಿಂದ ಪಾಠ ಪ್ರವಚನ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮ್ಮನ್ನು ಬೇರೆಡೆ ನಿಯೋಜಿಸುವಂತೆ ಡಿಡಿಪಿಐ ಡಿ.ಆರ್. ನಾಯ್ಕಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.