ಶಿಡ್ಲಘಟ್ಟಕ್ಕೆ ರಾಮಸಮುದ್ರ ಕೆರೆ ನೀರು: ವಿರೋಧ

| Published : May 08 2025, 12:34 AM IST / Updated: May 08 2025, 12:35 AM IST

ಸಾರಾಂಶ

ಕೂಡಲೆ ಈ ಯೋಜನೆ ಕೈಬಿಟ್ಟು ಜೂನ್-ಜುಲೈ 2025 ಕ್ಕೆ ಕೆರೆ ವ್ಯಾಪ್ತಿಯ ಅಚ್ಚುಕಟ್ಟು ಜಮೀನುಗಳಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಬಿಡಲು ಒತ್ತಾಯಿಸಿ ಕೆರೆ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಸದಸ್ಯರು, ಎಸ್ ದೇವಗಾನಹಳ್ಳಿಯ ಹಾಗೂ ರಾಮಸಮುದ್ರ ಕೆರೆ ವ್ಯಾಪ್ತಿಯ ಗ್ರಾಮಗಳ ರೈತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆಯ ನೀರು ಶಿಡ್ಲಘಟ್ಟ ನಗರಕ್ಕೆ ಹರಿಸುವ ಯೋಜನೆ ಸಿದ್ಧಪಡಿಸುತ್ತಿರುವುದನ್ನು ವಿರೋಧಿಸಿದ ರಾಮಸಮುದ್ರ ಕರೆ ಅಚ್ವುಕಟ್ಟುದಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಗಡಿಯಲ್ಲಿರುವ ಎಸ್.ದೇವಗಾನಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ರಾಮಸಮುದ್ರ ಕೆರೆ ಕುಡಿಯುವ ಮತ್ತು ನೀರಾವರಿಗೆ ಅನುಕೂಲಕರ ಕೆರೆಯಾಗಿದೆ. ಆ ಕೆರೆ ನೀರನ್ನ ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಪೂರೈಸಲು ಹರಿಸಲು ಜಿಲ್ಲಾಡಳಿತ ಯೋಜನೆ ರೂಪಿಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ಜಮೀನುಗಳಿಗೆ ನೀರು ಹರಿಸಲು ಆಗ್ರಹ

ಕೂಡಲೆ ಈ ಯೋಜನೆ ಕೈಬಿಟ್ಟು ಜೂನ್-ಜುಲೈ 2025 ಕ್ಕೆ ಕೆರೆ ವ್ಯಾಪ್ತಿಯ ಅಚ್ಚುಕಟ್ಟು ಜಮೀನುಗಳಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಬಿಡಲು ಒತ್ತಾಯಿಸಿ ಕೆರೆ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಸದಸ್ಯರು, ಎಸ್ ದೇವಗಾನಹಳ್ಳಿಯ ಹಾಗೂ ರಾಮಸಮುದ್ರ ಕೆರೆ ವ್ಯಾಪ್ತಿಯ ಗ್ರಾಮಗಳ ರೈತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯ ಸಾದಲಿ ಹೋಬಳಿ ಎಸ್ ದೇವಗಾನಹಳ್ಳಿ ರಾಮಸಮುದ್ರ ಕೆರೆಯು 1889 ರಲ್ಲಿ ಸ್ಥಾಪನೆಯಾಗಿ1894 ರಲ್ಲಿ ಉದ್ಘಾಟನೆಯನ್ನು ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ಅಂದಿನ ಮಂತ್ರಿ ಮಂಡಲದ ಕಾರ್ಯದರ್ಶಿಯಾದ ಶೇಷಗಿರಿ ಅಯ್ಯರ್ ರವರು ಉದ್ಘಾಟನೆ ಮಾಡಿ ಕೃಷಿ ಬಳಕೆಗೆಂದು ಕೆರೆಯನ್ನು ನಿರ್ಮಿಸಿದ್ದಾರೆ. ಈ ಭಾಗಕ್ಕೆ ಈ ಕೆರೆಯ ಆಸರೆಯಾಗಿದ್ದು ಕೆರೆಯು ಮೂರು ಬಾರಿ ಕೊಡಿ ಹರಿದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೃಷಿಗೆ ನೀರೊದಗಿಸುವ ಕೆರೆ

ಈ ಭಾಗಕ್ಕೆ ಕೆರೆಯು ಮೂಲ ಆಧಾರ ಹಾಗು ಜಲಮೂಲ ಒಂದೇ ಆಗಿದ್ದು, ಯಾವುದೇ ನದಿ ನಾಲೆಗಳು ಇಲ್ಲದಿರುವುದರಿಂದ ಇಲ್ಲಿನ ರೈತರು ಸುಮಾರು ಶೇ 70 ರಷ್ಟು ಬಡ ಎಸ್ಸಿ ಎಸ್ಟಿ ಹಿಂದುಳಿದ ಅಲ್ಪಸಂಖ್ಯಾತರ ರೈತರು ಈ ಕೆರೆಯನ್ನು ನಂಬಿ ಜೀವನೋಪಾಯ ಮಾಡುತ್ತಿರುವುದರಿಂದ ಜಿಲ್ಲಾಡಳಿತ ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಯೋಜನೆ ತಯಾರಿಸುತ್ತಿರುವುದಾಗಿ ತಿಳಿದುಬಂದಿದ್ದು, ಅಧನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧದ ಇಲ್ಲಿನ ಸತ್ಯಾಂಶಗಳನ್ನು ಮನಗಂಡು ಮತ್ತೊಮ್ಮೆ ಕೂಲಂಕಷವಾಗಿ ಮರು ಪರಿಶೀಲಿಸಿ ಯೋಜನೆಯನ್ನು ಕೈಬಿಟ್ಟು ಪಂಚಾಯತ್ ರಾಜ್ 1998 ಕಾಯ್ದೆ 63(ಎ) ನಿಯಮ ಹಾಗೂ ಕೃಷಿ ಕಾಯ್ದೆ,ನೀರಾವರಿ ಕಾಯ್ದೆ ಅನ್ವಯ ಸದರಿ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ನೀರನ್ನು ಜೂನ್ ಜುಲೈ 2025 ಕ್ಕೆ ಬಿಡಲು ಸಂಭಂದಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕ ಹಿತದೃಷ್ಟಿ ಹಾಗೂ ಎಸ್ ಸಿ, ಎಸ್ ಟಿ ರೈತರ ಹಿತದೃಷ್ಟಿಯಿಂದ ಸೂಚಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಲಕ್ಷ್ಮಿಪತಿ, ನಾಗೇಶ್, ಚಂದ್ರಶೇಖರ್,ವೆಂಕಟೇಶಪ್ಪ,ಡಿ.ವಿ.ಪ್ರಸಾದ್, ವೆಂಕಟಪತಿ, ರಮೇಶ್, ಮತ್ತಿತರರು ಇದ್ದರು.