ರಾಜ್ಯದಲ್ಲಿ ವರ್ಗಾವಣೆ ದಂಧೆ ಜೋರು: ಬಸವರಾಜ ರಾಯರಡ್ಡಿ

| Published : May 08 2025, 12:34 AM IST

ಸಾರಾಂಶ

ನೌಕರರ ವರ್ಗಾವಣೆಯಲ್ಲಿ ಹಣದ ವ್ಯವಹಾರವೂ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದ ಹೊರತೂ ಅಭಿವೃದ್ಧಿ ಮಾಡುವುದು ಕಷ್ಟ. ಶಾಸಕರು, ಸಂಸದರು, ಸಚಿವರು ತಮಗೆ ಬೇಕಾದ ಅಧಿಕಾರಿಗಳನ್ನು, ಅದರಲ್ಲೂ ಸಂಬಂಧಿಕರನ್ನೇ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ಕೊಪ್ಪಳ:

ರಾಜ್ಯದಲ್ಲಿ ಈಗಲೂ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ತಮ್ಮದೇ ಸರ್ಕಾರದ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಎದುರಿನಲ್ಲಿಯೇ ಆಡಳಿತ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು.

ನೌಕರರ ವರ್ಗಾವಣೆಯಲ್ಲಿ ಹಣದ ವ್ಯವಹಾರವೂ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದ ಹೊರತೂ ಅಭಿವೃದ್ಧಿ ಮಾಡುವುದು ಕಷ್ಟ. ಶಾಸಕರು, ಸಂಸದರು, ಸಚಿವರು ತಮಗೆ ಬೇಕಾದ ಅಧಿಕಾರಿಗಳನ್ನು, ಅದರಲ್ಲೂ ಸಂಬಂಧಿಕರನ್ನೇ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಹಣ ಪಡೆದು ಲೆಟರ್‌ಹೆಡ್‌ ನೀಡಿ ವರ್ಗಾವಣೆ ಮಾಡಿಸಿ, ಆನಂತರ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಹಾಗೂ ಜನಸಾಮಾನ್ಯರ ಸೇವೆಗೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದು ವಿಷಾಧಿಸಿದರು.

ಈಗಾಗಲೇ ಇದಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಕೌನ್ಸೆಲಿಂಗ್ ಜಾರಿ ಮಾಡಲಾಗಿದೆ. ಇದನ್ನು ಎಲ್ಲ ಇಲಾಖೆಗಳಿಗೂ ಅನ್ವಯಿಸಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಅಬಕಾರಿ ಇಲಾಖೆ, ಪಿಡಬ್ಲ್ಯೂಡಿಯಲ್ಲಿ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆಯನ್ನು ಮಾಡಿದರೆ ಸೂಕ್ತ ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇನೆ. ಹಾಗೊಂದು ವೇಳೆ ಮುಂದಿನ ದಿನಗಳಲ್ಲಿ ನನಗೆ ಹಣಕಾಸು ಖಾತೆಯನ್ನು ನೀಡಿದ್ದೇ ಆದರೆ ಖಂಡಿತವಾಗಿಯೂ ಇದಕ್ಕೆಲ್ಲ ಪರಿಹಾರ ನೀಡುತ್ತೇನೆ. ಇಡೀ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸೆಲಿಂಗ್ ಮೂಲಕವೇ ಮಾಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ. ಸರ್ಕಾರಿ ನೌಕರರೂ ಸಹ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಬಡ ಜನರ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.