ಸಾರಾಂಶ
ಶಿರಸಿ: ಓದುವ ಹವ್ಯಾಸ ರೂಢಿಸಿಕೊಂಡರೆ ಸಾಹಿತ್ಯಾಸಕ್ತಿ ಬೆಳೆಯುತ್ತದೆ ಎಂದು ಲೇಖಕಿ, ಉಪನ್ಯಾಸಕಿ ಭವ್ಯ ಹಳೆಯೂರು ಹೇಳಿದರು.
ಕಸಾಪ ತಾಲೂಕು ಘಟಕ ಆಶ್ರಯದಲ್ಲಿ ನಗರದ ನೆಮ್ಮದಿ ಕುಟೀರದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.೧೧೧ ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ಬಹು ವಿಸ್ತಾರವಾಗಿ ಹೆಮ್ಮರವಾಗಿ ಬೆಳೆದಿದೆ. ಇತಿಹಾಸ ವನ್ನು ತುಂಬ ಆಳವಾಗಿ ನೋಡುತ್ತಾ ಹೋದಂತೆ ವಾಸ್ತವ ಮರೆತು ಹೋಗುತ್ತದೆ. ಕನ್ನಡ ಸಾಹಿತ್ಯ ದಲ್ಲಿ ಆಂಗ್ಲ ಭಾಷೆಯ ಬಳಕೆ ಮಿತಿ ಮೀರುತ್ತಿದೆ. ಸಾಹಿತ್ಯ ಕ್ಷೇತ್ರದತ್ತ ಯುವಕರ ಚಿತ್ತ ಬಹಳ ಕಡಿಮೆಯಾಗುತ್ತಿದೆ. ಓದುವವರ ಸಂಖ್ಯೆಯೂ ತೀರಾ ಇಳಿಮುಖವಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಓದುಗರ ಸಂಖ್ಯೆ ಇಳಿಮುಖ ಕಾರಣ ಮನಮುಟ್ಟುವಂತಹ ಕೃತಿಗಳು ಹಾಗೂ ಬರಹಗಳ ಕೊರತೆಯಾಗಿದೆ ಎಂದರು.
ವಿದ್ಯಾರ್ಥಿಗಳು ಸಾಹಿತ್ಯ ಕೂಟದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಗೆ ಸಾಹಿತ್ಯ ದಲ್ಲಿ ಆಸಕ್ತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಕಸಾಪ ಮಾಡಬೇಕಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಕೆ.ಎನ್. ಹೊಸ್ಮನಿ ಮಾತನಾಡಿ, ಕರ್ನಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನಿಂದ ಜನ್ಮ ತಾಳಿದ ಪರಿಷತ್ 20 ವರ್ಷಗಳ ನಂತರ ಕನ್ನಡ ಸಾಹಿತ್ಯ ಪರಿಷತ್ ಆಗಿ ಬದಲಾವಣೆಗೊಂಡಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾಷಾಭಿಮಾನ, ಸಾಹಿತ್ಯಾಸಕ್ತಿ ಪರಿಷತ್ ಹುಟ್ಟಿಕೊಳ್ಳಲು ಕಾರಣವಾಯಿತು. ನಾಡು ನುಡಿಯ ರಕ್ಷಣೆ, ಗ್ರಂಥಗಳ ಪ್ರಕಟಣೆ, ಕನ್ನಡ ಭಾಷೆಯನ್ನು ಉಳಿಸುವುದೇ ಕನ್ನಡ ಸಾಹಿತ್ಯ ಪರಿಷತ್ ನ ಕೆಲಸ ಎಂದರು.
ಸಾಹಿತ್ಯ ಪರಿಷತ್ ಕನ್ನಡ ನಾಡು, ನುಡಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನೃಪತುಂಗದಂತಹ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಕನ್ನಡ ಬಹಳ ಗಟ್ಟಿಯಾಗಿದೆ. ಬೆಳೆಸುವ ಜವಾಬ್ದಾರಿಯನ್ನು ಕಸಾಪ ವಹಿಸಿಕೊಂಡಿದೆ ಎಂದರು.ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕನ್ನಡ ಭಾಷೆಗೆ ಅಳಿವಿಲ್ಲ. ಸಾಹಿತ್ಯ ಪರಿಷತ್ ೧೧೧ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ನಿರಂತರವಾಗಿ ತನ್ನ ಚಟುವಟಿಕೆಗಳ ಮೂಲಕ ಮುಂದುವರೆಯುತ್ತಿದೆ ಎಂದರು.
ಕಸಾಪ ಶಿರಸಿ ಘಟಕದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು. ವಿಮಲಾ ಭಾಗ್ವತ್ ಪ್ರಾರ್ಥಿಸಿದರು. ವಿ.ಆರ್.ಹೆಗಡೆ ಮತ್ತಿಘಟ್ಟಾ ಸ್ವಾಗತಿಸಿದರು. ಶಿವಪ್ರಸಾದ ಹಿರೇಕೈ ವಂದಿಸಿದರು, ಕೃಷ್ಣ ಪದಕಿ ನಿರ್ವಹಿಸಿದರು.