ಕನ್ನಡ ಸಾಹಿತ್ಯ ಮತ್ತುಕಾವ್ಯ ಪ್ರಪಂಚಕ್ಕೆ ವರಕವಿ ದ.ರಾ.ಬೇಂದ್ರೆ ಅವರ ಕೊಡುಗೆ ಅನನ್ಯವಾಗಿದೆ. ಅವರ ಸಾಹಿತ್ಯ ಕೃತಿಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು ಇಂದಿಗೂ ಜನಪ್ರಿಯವಾಗಿವೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ಸಾಹಿತ್ಯ ಮತ್ತುಕಾವ್ಯ ಪ್ರಪಂಚಕ್ಕೆ ವರಕವಿ ದ.ರಾ.ಬೇಂದ್ರೆ ಅವರ ಕೊಡುಗೆ ಅನನ್ಯವಾಗಿದೆ. ಅವರ ಸಾಹಿತ್ಯ ಕೃತಿಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು ಇಂದಿಗೂ ಜನಪ್ರಿಯವಾಗಿವೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ದ.ರಾ. ಬೇಂದ್ರೆ ಜನ್ಮ ದಿನದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಪ್ರದರ್ಶನ ಮತ್ತು ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಳ ಭಾಷೆ, ಜಾನಪದ ಸೊಗಡಿನ ಹಾಗೂ ಅನುಭವದ ಆಳದಿಂದ ಬಂದ ಅವರ ಕವನಗಳು ಓದುಗರ ಗಮನ ಸೆಳೆಯುತ್ತವೆ. ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸುವುದೇ ಅವರ ಹುಟ್ಟುಹಬ್ಬಕ್ಕೆ ನೀಡುವ ಯೋಗ್ಯ ಕಾಣಿಕೆಯಾಗಿದೆ. ವಿದ್ಯಾರ್ಥಿಗಳು ಅವರ ಬದುಕು-ಬರಹದಿಂದ ಪ್ರೇರಣೆ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಬೇಂದ್ರೆಯಂತಹ ಸಾಹಿತಿಗಳ ಸಾಹಿತ್ಯ ಕೃತಿಗಳ ಅಧ್ಯಯನ ಮಾಡಿ ಅವುಗಳಲ್ಲಿನ ಮೌಲ್ಯ ಅರಿತು ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಕೃತಿಗಳ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕನ್ನಡ ಉಪನ್ಯಾಸಕ ಕೃಷ್ಣ ಲಮಾಣಿ ಮತ್ತು ವಿದ್ಯಾರ್ಥಿ ಗಾಯತ್ರಿ ಮಡಿವಾಳರ ಬೇಂದ್ರೆ ಅವರ ಬದುಕು-ಬರಹ ಕುರಿತು ಮಾತನಾಡಿದರು. ಉಪನ್ಯಾಸಕರಾದ ಎಂ.ಡಿ. ಕೋರವಾರ, ಕೀರ್ತಿದಾಸರ, ವಿದ್ಯಾರ್ಥಿಗಳಾದ ತುಳಸವ್ವ ಹಲಕುರ್ಕಿ, ಸ್ನೇಹಾ ಅರಬಿ ಮತ್ತು ರಕ್ಷಿತಾ ಮಸೂತಿ ಬೇಂದ್ರೆ ವಿರಚಿತ ಗೀತೆ ಸಾದರಪಡಿಸಿದರು.ಉಪನ್ಯಾಸಕಿ ಗೀತಾ ಕಿಲಬನೂರ ಸ್ವಾಗತಿಸಿದರು. ಸಾಲಿಯಾ ಮೋಮಿನ್ ನಿರೂಪಿಸಿದರು. ದಿಲ್ಶಾದ್ ನದಾಫ್ ವಂದಿಸಿದರು. ಬೇಂದ್ರೆ ಕುರಿತ ವಿಡಿಯೋ ಕ್ಲಿಪಿಂಗ್‌ನ ಎಲ್‌ಸಿಡಿ ಮೂಲಕ ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇದ್ದರು.