ನಿವೇಶನಕ್ಕೆ ಒತ್ತಾಯಿಸಿ ಗಂಜಿಗುಂಟೆ ಮಹಿಳೆಯರಿಂದ ಅಹೋರಾತ್ರಿ ಧರಣಿ

| Published : Mar 27 2024, 01:07 AM IST

ನಿವೇಶನಕ್ಕೆ ಒತ್ತಾಯಿಸಿ ಗಂಜಿಗುಂಟೆ ಮಹಿಳೆಯರಿಂದ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಜಿಗುಂಟೆ ಗ್ರಾಮದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಅಲ್ಲಿನ ನಿವೇಶನರಹಿತ ಮಹಿಳೆಯರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲ್ಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಅಲ್ಲಿನ ನಿವೇಶನರಹಿತ ಮಹಿಳೆಯರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಧರಣಿ ನಿರತ ಮಹಿಳೆಯರಾದ ಕೆಂಚಮ್ಮ, ಶೈಲಮ್ಮ, ಚೌಡಮ್ಮ, ಕಮಲಮ್ಮ, ದೇವಿರಮ್ಮ, ಯಶೋಧಮ್ಮ, ಲಕ್ಷ್ಮಕ್ಕ, ವಿಜಯಮ್ಮ, ತಿಪ್ಪಕ್ಕ, ಕರಿಯಮ್ಮ, ಶಾರದಮ್ಮ ಮುಂತಾದವರು ಮಾತನಾಡಿ, ಗ್ರಾಮದಲ್ಲಿ ಕಳೆದ ಹಲವಾರು ದಶಕಗಳಿಂದ ೨೦ಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬಗಳು ವಾಸಿಸುತ್ತಿದ್ದರೂ ನಮಗೆ ನಿವೇಶನ, ಮನೆ ನೀಡಿಲ್ಲ. ಹಲವು ಬಾರಿ ಸರ್ಕಾರದ ಸವಲತ್ತು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಿ ವಿಫಲವಾಗಿದ್ದೇವೆ. ಅಧಿಕಾರಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ನಮ್ಮ ಮನವಿಯನ್ನು ಪುರಸ್ಕರಿಸಲು ಸಿದ್ಧರಿಲ್ಲ. ಹಲವಾರು ಬಾರಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ನಮಗೆ ನಿವೇಶನ ನೀಡುವಂತೆ ವಿನಂತಿಸಿಕೊಂಡರೂ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನಾವು ನಿವೇಶನ ಮನೆ ಇಲ್ಲದೆ, ಬೀದಿಯಲ್ಲಿ ಜೀವನ ಮಾಡುತ್ತಿದ್ದು, ಪಂಚಾಯಿತಿ ಆಡಳಿತ ಕೂಡಲೇ ನಮಗೆ ನಿವೇಶನ ಒದಗಿಸಬೇಕು ಎಂದರು.

ಭರವಸೆ: ಧರಣಿ ನಡೆಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌತಮಿ ಪ್ರತಿಭಟನಕಾರರೊಂದಿಗೆ ಮಾತನಾಡಿ, ನಿವೇಶನ ನೀಡುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು.