ಸಾರಾಂಶ
ಸಾಗರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿರುವವರನ್ನು ಕೂಡಲೇ ಹಿಡಿದು, ಸೂಕ್ತ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿ ಕರ್ಕಿಕೊಪ್ಪ, ಶೆಟ್ಟಿಸರ, ಬೆಂಕಟವಳ್ಳಿ, ಹಕ್ರೆ, ವರದಹಳ್ಳಿ ಭಾಗದ ನೂರಾರು ಗ್ರಾಮಸ್ಥರು ಪಟ್ಟಣದ ಡಿವೈಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಯಡಜಿಗಳೇಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಪ್ರಕರಣ ನಡೆಯುತ್ತಿವೆ. ಆದರೆ, ಗ್ರಾಮಾಂತರ ಅಥವಾ ಪೇಟೆ ಠಾಣೆ ಪೊಲೀಸರಾಗಲಿ ತಪ್ಪಿತಸ್ಥರನ್ನು ಹಿಡಿಯಲು ಮುಂದಾಗಿಲ್ಲ. ಗ್ರಾಮಸ್ಥರು ಹಿಡಿದುಕೊಟ್ಟವರ ವಿರುದ್ಧವೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಮೀನ-ಮೇಷ ಎಣಿಸಿ, ಯಾರದೋ ಒತ್ತಾಯಕ್ಕೆ ಮಣಿದು ಎಫ್ಐಆರ್ ಹಾಕಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಅಪಾಯಕಾರಿ ನಡೆ ಎಂದರು.ಗ್ರಾಮೀಣ ಜನರು ಮನೆಯಿಂದ ಹೊರಗೆ ಬರುವುದೇ ತಪ್ಪೇನೋ ಎನ್ನುವ ಹೆದರಿಕೆ ಮನಸ್ಥಿತಿಯಲ್ಲಿ ಬದುಕುವಂತಾಗಿದೆ. ರಾಜಕೀಯ ಒತ್ತಡಗಳಿಗೆ ಪೊಲೀಸರು ತಲೆಬಾಗಿ ಕಳ್ಳರನ್ನು ಬಿಟ್ಟುಕಳಿಸುವ ನಡೆ ಬೇಸರದ ಸಂಗತಿ. ಕಳ್ಳತನ ತಪ್ಪಿಸಲು ಮತ್ತು ಸಾರ್ವಜನಿಕರಿಗೆ ರಕ್ಷಣೆ ಒದಗಿಸಲು ಇಲಾಖೆಯ ಗಸ್ತು ಹಾಕಬೇಕಿದೆ. ಇಲಾಖೆ ಕೇಳಿದರೆ ಸಹಕಾರ ನೀಡಲು ನಾವು ಸಿದ್ಧ. ಇದೇ ಸ್ಥಿತಿ ಮುಂದುವರಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದರು.
ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಮನವಿ ಸ್ವೀಕರಿಸಿ, ಕಳ್ಳತನವೂ ಸೇರಿದಂತೆ ಎಲ್ಲ ಅಪರಾಧಿ ಪ್ರಕರಣದಲ್ಲೂ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಗಸ್ತು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಎಂ.ಜಿ. ಕೃಷ್ಣಮೂರ್ತಿ, ಗಗನ್ ಆಚಾರ್ಯ, ಗ್ರಾಪಂ ಸದಸ್ಯ ರವಿ ಸೆಟ್ಟಿಸರ, ಎಸ್.ಪಿ.ಲಕ್ಷ್ಮೀನಾರಾಯಣ, ಉದಯ ಕರ್ಕಿಕೊಪ್ಪ, ಮಹೇಶ, ಪ್ರವೀಣ್ ಸೆಟ್ಟಿಸರ, ಮಧುರಾ ಬೆಂಕಟವಳ್ಳಿ, ಪ್ರೇಮ, ಲೀಲಾವತಿ, ಚೈತ್ರ ಮಾವಿನಕುಳಿ, ಅರುಣ ಪೂಜಾರಿ, ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
- - - -12ಕೆ.ಎಸ್.ಎ.ಜಿ.2:ಸಾಗರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕಳ್ಳರ ಹಾವಳಿ ತಡೆಗಟ್ಟಲು ಕೋರಿ ಡಿವೈಎಸ್‌ಪಿ ಕಚೇರಿ ಎದುರು ಸೋಮವಾರ ನೂರಾರು ಗ್ರಾಮಸ್ಥರು ಪ್ರತಿಭಟಿಸಿ, ಮನವಿ ಸಲ್ಲಿಸಿದರು.