ಸಾರಾಂಶ
ಕನಕಪುರದ ಅಂಬೇಡ್ಕರ್ ಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ । ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಪವರ ಕಾರ್ಮಿಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಕನಕಪುರನಮ್ಮ ಅನಾರೋಗ್ಯವನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಿ ಆರೋಗ್ಯವಂತರನ್ನಾಗಿ ಮಾಡುವ ವೈದ್ಯ ವೃತ್ತಿಯಷ್ಟೇ ಪೌರಕಾರ್ಮಿಕರ ವೃತ್ತಿಯೂ ಸಹ ಸರಿಸಮಾನ ವಾದುದ್ದು ಎಂದು ಪೌರಾಯುಕ್ತ ಮಹದೇವ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ಮತ್ತು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಸ್ವಸ್ಥತೆಯನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಿ ನಮ್ಮ ಆರೋಗ್ಯವನ್ನು ಕಾಪಾಡುವ ವೈದ್ಯರಿಗೆ ‘ವೈದ್ಯೋಂ ನಾರಾಯಣೋ ಹರಿ’ ಎನ್ನುವಂತೆ ಸ್ವಚ್ಛತೆಯನ್ನು ಕಾಪಾಡಿ ಸಮಾಜದ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರನ್ನೂ ‘ಪೌರಕಾರ್ಮಿಕ ನಾರಾಯಣೋ ಹರಿ’ ಎಂದರೆ ತಪ್ಪಾಗಲಾರದು ಎಂದರು.ಪ್ರತಿನಿತ್ಯ ನಾವೆಲ್ಲರೂ ಎಚ್ಚರಗೊಳ್ಳುವ ಮುನ್ನವೇ ಬೆಳಿಗ್ಗೆ 5:00ಗೆ ಶಿಸ್ತಿನ ಸಿಪಾಯಿಗಳಂತೆ ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಪೌರಕಾರ್ಮಿಕರು, ನಾವು ಮನೆಯಿಂದ ಹೊರಗೆ ಬರುವ ವೇಳೆಗೆ ಸ್ವಚ್ಛ ಪರಿಸರವನ್ನು ಕೊಡುವ ಅವರ ಸೇವೆ ಶ್ಲಾಘನೀಯವಾದದ್ದು. ಪೌರಕಾರ್ಮಿಕರ ಮಕ್ಕಳು ಪೌರವ ಕಾರ್ಮಿಕರಾಗದೆ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆ ಗಳನ್ನು ಅಲಂಕರಿಸಲಿ ಎಂದು ಶುಭ ಹಾರೈಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ ಮಾತನಾಡಿ, ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದಿದ್ದ ತಾಲೂಕು ಇಂದು ಅಭಿವೃದ್ಧಿ ಕಂಡಿದೆ ಎಂದರೆ ಶಾಸಕರ ಪರಿಶ್ರಮ ಇದೆ. ಅದೇ ರೀತಿ ಕನಕಪುರ ನಗರ ಸುಂದರ ಹಾಗೂ ಸ್ವಚ್ಛವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕ ಸಿಬ್ಬಂದಿ, ಅಧಿಕಾರಿಗಳ ಶ್ರಮ ಇದೆ ಎಂದರು.ಭಾರತಕ್ಕೆ ಸಂವಿಧಾನವನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದಲ್ಲಿದ್ದ ಜವಹರಲಾಲ್ ನೆಹರು ಅವರು ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರು ಆಗಬೇಕು ಎಂದು ಜವಾಬ್ದಾರಿಯನ್ನು ಕೊಟ್ಟಿದ್ದರು. ಇಂದು ನಾವು ನೀವೆಲ್ಲರೂ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರೆ ಡಾ. ಅಂಬೇಡ್ಕರ್ ಅವರೇ ಕಾರಣ. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರತಿನಿತ್ಯ ಸ್ವಚ್ಛವಾಗಿಡುವ ಪೌರಕಾರ್ಮಿಕರ ದಿನಾಚರಣೆಯನ್ನು ನಾವೆಲ್ಲರೂ ಆಚರಣೆ ಮಾಡಬೇಕು, ಪೌರ ನೌಕರರ ಸಂಘಕ್ಕೆ ನಮ್ಮ ಬಿಡಿಸಿಸಿ ಬ್ಯಾಂಕ್ ವತಿಯಿಂದ ಕಡಿಮೆ ಬಿಟ್ಟಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ ಅದರ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು ಮಾತನಾಡಿ. ಪೌರಕಾರ್ಮಿಕರ ಸಮುದಾಯ, ಶ್ರಮಿಕ ವರ್ಗ, ಚಾಲಕರು, ಯುಜಿಡಿ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ ಗಳು, ಎಲ್ಲಾ ನೌಕರರು ಬಹಳಷ್ಟು ಶ್ರಮವಹಿಸಿ ಕೆಲಸ ಮಾಡುತ್ತಾರೆ. ಆದರೆ ಸರ್ಕಾರ ಏಜೆನ್ಸಿಗಳಿಗೆ ಕೊಡುವುದರಿಂದ ಏಜೆನ್ಸಿಗಳಿಗೆ ಜಿಎಸ್ ಟಿ ಕಡಿತ ಮಾಡಿಕೊಂಡು ನೌಕರರಿಗೆ ಸಂಬಳ ಕೊಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ. ಸರ್ಕಾರವೇ ಪೌರಕಾರ್ಮಿಕರನ್ನು ಕಾಯಂ ಮಾಡಿ ನೇರ ಪ್ರಾವತಿಗೆ ತಂದರೆ ಸರ್ಕಾರಕ್ಕೂ ನಷ್ಟ ತಪ್ಪುತ್ತದೆ, ನೌಕರರಿಗೂ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಪೌರಕಾರ್ಮಿಕರು ನಾನ ರೋಗ ರುಜಿನಗಳಿಗೆ ತುತ್ತಾಗುತ್ತಾರೆ, ಪೌರಕಾರ್ಮಿಕರನ್ನು ಕಷ್ಟಗಳನ್ನು ಕೇಳುವವರು ಇಲ್ಲ. ಅವರ ಆರೋಗ್ಯವನ್ನು ಕಾಪಾಡಬೇಕಾದರೆ ಅವರಿಗೆ ಆರೋಗ್ಯ ವಿಮೆ ಕೊಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಪೌರ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ದಿಲೀಪ್, ಕೃಷ್ಣಮೂರ್ತಿ, ಕೋಟೆ ಕಿರಣ್, ನಗರಸಭಾ ಸದಸ್ಯೆಯರಾದ ಲಕ್ಷ್ಮೀದೇವಮ್ಮ, ಪದ್ಮಮ್ಮ, ವಿಜಯ್ ಕುಮಾರ್, ಶೋಭಾ, ರಾಮದುರ್ಗಯ್ಯ, ರಾಮದಾಸು, ಸೈಯದ್ ಮುಜುಬುಲ್ಲ, ಜಯರಾಮು, ರಾಜು, ಮಹಾಲಕ್ಷ್ಮಿ, ಹೇಮಾ,ಜಹೆದಾ ಬಾನು, ಮುಖಂಡ ನೀಲಿ ರಮೇಶ್, ಆರೋಗ್ಯ ಇಲಾಖೆಯ ವೆಂಕಟೇಶ್, ಮಲ್ಲಿಕಾರ್ಜುನ್, ಚಿರಂಜೀವಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ಧನ್, ಉಪಾಧ್ಯಕ್ಷ ವರದಯ್ಯ, ಕಾರ್ಯದರ್ಶಿ ಕೃಷ್ಣ, ಚನ್ನಪಟ್ಟಣ ಮಾಗಡಿ ಸಂಘದ ಪದಾಧಿಕಾರಿಗಳು ಪೌರಕಾರ್ಮಿಕರು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.---
ಕನಕಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.