ಕೃಷಿಯೇತರ ಮಳಿಗೆ ತೆರವು ಮಾಡದಿದ್ರೆ ಜ.1ರಿಂದ ಧರಣಿ

| Published : Nov 22 2024, 01:16 AM IST

ಸಾರಾಂಶ

ತೆರವಿಗೆ ತಿಂಗಳ ಕಾಲಾವಕಾಶ ಕೋರಿದ ಎಪಿಎಂಸಿ ಸೆಕ್ರೆಟರಿ. ಕಲಬುರಗಿಯಲ್ಲಿ ಹೋರಾಟಗಾರ ಎಂ.ಎಸ್.ಪಾಟೀಲ್‌ ನರಿಬೋಳ್‌ ನೇತೃತ್ವದಲ್ಲಿ ಎಪಿಎಂಸಿ ಅಂಗಳದಲ್ಲಿ ಪ್ರತಿಭಟನೆ ನಡೆಸಿ, ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಂಗಳದಲ್ಲಿ ನೂರಕ್ಕೂ ಹೆಚ್ಚು ಕೃಷಿಯೇತರ ಅಂಗಡಿಗಳನ್ನು ತೆರವು ಮಾಡಲು ತಿಂಗಳ ಕಾಲಾವಕಾಶ ನೀಡಿರುವ ಹೋರಾಟಗಾರರು ಮಳಿಗೆ ತೆರವು ಮಾಡದಿದ್ದಲ್ಲಲಿ ಜ.1ರಿಂದ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌.ಪಾಟೀಲ್‌ ನರಿಬೋಳ್‌ ನೇತೃತ್ವದಲ್ಲಿ

ಗುರುವಾರ ನಡೆದ ಪ್ರತಿಭಟನೆಯಲ್ಲಿ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹೋರಾಟಗಾರರು, ಕೃಷಿ ಚಟುವಟಿಕೆಗಳಿಗೆ ಮೀಸಲಿರೋ ಜಾಗದಲ್ಲಿ ಬೇರೆ ಮಳಿಗೆ ಬಂದು ತೊಂದರೆ ಆಗುತ್ತಿರುವುದರಿಂದ ತಕ್ಷಣ ತೆರವು ಮಾಡಿಸಬೇಕು, ಇಲ್ಲದೆ ಹೋದಲ್ಲಿ ಧರಣಿ ನಿಶ್ಚಿತ ಎಂದಿದ್ದಾರೆ.

ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಕಿರಾಣಿ ಅಂಗಡಿ ಟ್ರಾನ್ಸ್‌ಪೋರ್ಟ್‌, ಎಲೆಕ್ಟ್ರಿಕ್‌ ಅಂಗಡಿ, ಪ್ಲಾಸ್ಟಿಕ್ ಶಾಪ್, ಕೋರಿಯರ್ ಸೇರಿದಂತೆ ಏಜೆನ್ಸಿಗಳು ಇತರ ವ್ಯಾಪಾರ ವಹಿವಾಟು ನಡೆಸಲು ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು ಇದರಿಂದ ಕೃಷಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಪಾರ್ಕಿಂಗ್ ಸ್ಥಳದಲ್ಲಿಯೂ ಮಳಿಗೆ ಹಾಕಿದ್ದಾರೆ. ಇದರಿಂದ ಸಂಚಾರ ಸಮಸ್ಯೆ ಕಾಡುತ್ತಿದೆ. ವಾಹನ ನಿಲುಗಡೆ ಜಾಗ ಸಿಗದೆ ಜನ, ರೈತರು ಪರದಾಡುತ್ತಿದ್ದಾರೆಂದು ಹೋರಾಟಗಾರ ಎಂ.ಎಸ್‌.ಪಾಟೀಲ್‌ ನರಿಬೋಳ್‌ ದೂರಿದರು.

ಗ್ರಾಮೀಣ ಅಬಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣ ಕುಮಾರ್‌ ನಾಯಕ್‌, ಹಿಂದು ಸೇನೆ ಲಕ್ಷ್ಮೀಕಾಂತ ಸ್ವಾದಿ, ಎಪಿಎಂಸಿ ಮಾಜಿ ಸದಸ್ಯ ವೀರಣ್ಣ ಬೆಲೂರೆ, ಮಹಾದೇವಿ ಕೆಸರಟಗೆ, ಅನೂರಾಧ ಹೂಗಾರ, ರಾಘವೆಂದ್ರ ಕುಲಕರ್ಣಿ, ಶರಣಗೌಡ ಪೋಲಿಸ್ ಪಾಟೀಲ, ತಾತಾಗೌಡ ಕೂಡಿ, ವಿರೇಶ ನಿಲಾ, ಶಿವು ರಾಮಸೆವಕ್ ಮಹೇಶ್ ಕೆಂಭಾವಿ, ರಮೇಶ್ ದೇಸಾಯಿ, ಮಹದೇವ್, ರಾಜು ಸ್ವಾಮಿ ಸಿದ್ದು ಕಂದಗಲ್ ಸಂಗಮೇಶ ಕಾಳನೂರ ಇದ್ದರು.

ಮನವಿ ಸ್ವೀಕರಿಸಿದ ಎಪಿಎಂಸಿ ಕಾರ್ಯದರ್ಶಿ ಮಾತನಾಡಿ, ನಾನು ಈಗಾಗಲೆ ಅಂತಿಮ ನೋಡಿಸ್ ನೀಡಿ ಖಾಲಿ ಮಾಡಲು ಸೂಚಿಸಿದ್ದೇನೆ. ವರ್ತಕರ ನಿಯೋಗ ಭೇಟಿ ಮಾಡಿ ಸ್ಪಲ್ಪ ಕಾಲಾವಾಕಾಶ ಕೇಳಿದ್ದಕ್ಕಾಗಿ ಸುಮ್ಮನಿದ್ದೇವೆ. ಡಿಸೆಂಬರ್ ಮುಗಿಯುವುದರೊಳಗಾಗಿ ಅವರೆ ಖಾಲಿ ಮಾಡಬೇಕು, ಮಾಡದಿದ್ದರೆ ನಾನು ಕಾನೂನಿನಂತೆ ಖಾಲಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.