ಸಾರಾಂಶ
ಶಿಡ್ಲಘಟ್ಟದ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಶಿಢ್ಲಘಟ್ಟ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.ಶಿಡ್ಲಘಟ್ಟ ತಾಲೂಕಿನಲ್ಲಿ ಅವಧಿ ಮುಕ್ತಾಯವಾಗಿರುವ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ವೇಳಾಪಟ್ಟಿಯನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ಚುನಾವಣಾ ಅಧಿಸೂಚನೆಯನ್ನು ನವೆಂಬರ್ 21 ರ ಗುರುವಾರ ಹೊರಡಿಸಿದ್ದು, ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 27 ಕೊನೆಯ ದಿನಾಂಕ ವಾಗಿರುತ್ತದೆ.ನಾಮಪತ್ರಗಳನ್ನು ಪರಿಶೀಲನೆಯನ್ನು ನವೆಂಬರ್ 28 ಮತ್ತು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ್ 30 ಕೊನೆಯ ದಿನ ವಾಗಿರುತ್ತದೆ. ಮತದಾನವನ್ನು ಡಿಸೆಂಬರ್ 8 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ.
ಮತಗಳ ಎಣಿಕೆಯನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.ವೇಳಾಪಟ್ಟಿಯಂತೆ ನವೆಂಬರ್ 21ರಿಂದ 27 ರವರೆಗೆ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದಾಗಿರುತ್ತದೆ. ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ೪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನವೆಂಬರ್ 21 ರಿಂದ ಡಿಸೆಂಬರ್ 11 ರವರೆಗೆ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಸದರಿ 4 ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ