ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗರ ಬರ್ಬರ ಹತ್ಯೆಯನ್ನು ಖಂಡಿಸಿ ಮೇ 22ರಂದು ಬೆ.10.30ಕ್ಕೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಯೇ ಈ ಹಿಂದೆ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯ ಬರ್ಭರ ಹತ್ಯೆ ಸಂಭವಿಸಿತ್ತು. ಆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದಲ್ಲಿ ಅಂಜಲಿ ಅಂಬಿಗರ ಯುವತಿಯ ಹತ್ಯೆ ಆಗುತ್ತಿರಲಿಲ್ಲ. ಇದರ ನೈತಿಕ ಹೊಣೆ ಹೊತ್ತು ರಾಜ್ಯದ ಅಸಮರ್ಥ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಅಂಜಲಿ ಅಂಬಿಗರ ಕುಟುಂಬವು ಬಡತನದಲ್ಲಿ ಬಳಲುತ್ತಿದೆ. ತಂದೆ, ತಾಯಿ ಇಲ್ಲ. ಅಜ್ಜಿ ಹಾಗೂ ಮೂವರು ಸಹೋದರಿಯರು ಇದ್ದು, ಅಂಜಲಿಯೇ ಮನೆಯ ನಿರ್ವಹಣೆಯನ್ನು ಮಾಡುತ್ತಿದ್ದರು. ಈಗ ಆಕೆಯನ್ನೂ ಸಹ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೀಗಾಗಿ ಮನೆಗೆ ಯಾರೂ ದಿಕ್ಕು ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಕ್ಕೆ ಒಂದು ಕೋಟಿ ರು.ಗಳ ಪರಿಹಾರ ಮತ್ತು ಹಿರಿಯ ಸಹೋದರಿಗೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.ಜಿಲ್ಲೆಯಲ್ಲಿ ಮರಳುಗಾರಿಕೆ, ಬಡ್ಡಿ ವ್ಯವಹಾರ, ಕೊಲೆಗಳು ಆಗುತ್ತಿವೆ. ಹಪ್ತಾ ವಸೂಲಿ ಆಗುತ್ತಿವೆ. ಇದರಿಂದ ಪೋಲಿಸರಿಗೆ ಯಾರೂ ಹೆದರುತ್ತಿಲ್ಲ. ಜಿಲ್ಲೆಯಲ್ಲಿನ ಲಾಡಮುಗುಳಿ, ಮಣ್ಣೂರ್, ಸಂಗಾಪುರ, ಗಂಗಂಪಳ್ಳಿ ಹಾಗೂ ಸಾವಳಗಿಯಲ್ಲೂ ಇಂತಹ ಘಟನೆಗಳು ಸಂಭವಿಸಿವೆ. ಕಾನೂನು, ಸಂವಿಧಾನ, ಬುದ್ಧ, ಬಸವ ಅಂಬೇಡ್ಕರ್ ಅವರ ಹೆಸರಿನಲ್ಲಿ ಆಡಳಿತ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಾರೆ. ಇಡೀ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆದ್ದರಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಧರ್ ಕೆ. ಮಂಗಳೂರೆ, ಚಂದ್ರಕಾಂತ್ ಕಿರಸಾವಳಗಿ, ಬಸವರಾಜ್ ಸಪ್ಪಣಗೋಳ್, ಪ್ರವೀಣ್ ಜಮಾದಾರ್, ಬೆಳ್ಳಪ್ಪಾ ಇಂಗನಕಲ್, ಪ್ರೇಮ್ ಕೋಲಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))