ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಕುಲಾಂತರಿ ತಳಿ ಆಹಾರಗಳನ್ನು ತಿರಸ್ಕರಿಸುವಂತೆ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಹನೂರು ಪಟ್ಟಣದ ನಾಡಪ್ರಭು ಕೆಂಪೇಗೌಡ ವೃತದಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಕುಲಾಂತರಿ ತಳಿ ನಮ್ಮ ದೇಶಕ್ಕೆ ಬಂದರೆ ಇಡೀ ಭಾರತದ ಜೈವಿಕ ವೈವಿಧ್ಯತೆ ಹಾಳಾಗುತ್ತದೆ. ಈ ಹಿಂದೆ ನಂಜುಂಡಸ್ವಾಮಿಯವರು ಇದ್ದಾಗ ಬಿ.ಟಿ ಅಕ್ಕಿ, ಬದನೆ ಬಹಿಷ್ಕರಿಸಲಾಗಿತ್ತು. ಕೇಂದ್ರ ಸಚಿವರಾಗಿದ್ದ ಜಯರಾಮ್ ರಮೇಶ್ ಅವರು ಜನಸಾಮಾನ್ಯರ ಅಭಿಪ್ರಾಯ ಪಡೆದು ಬೇಡವೆಂದು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಇದೀಗ ಕುಲಾಂತರಿ ತಳಿ ತರಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದರು.
ನಂತರ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪ್ರಮುಖ ಮೂರು ಕೆರೆಗಳಿಗೆ ನೀರು ತುಂಬಿಸುವುದು, ವಿದ್ಯುತ್ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ವಿದ್ಯುತ್ ಪರಿವರ್ತಕಗಳು ಬದಲಾವಣೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಸ್ವತ್ತು ಮಾಡಿಕೊಡುವುದು ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.ವೈಶಂಪಾಳ್ಯ ಗ್ರಾಮದ ಯುವ ರೈತ ಸತೀಶ್ ಮಾತನಾಡಿ, ನಾವು ಹಂದಿಯಿಂದ ನಾಶವಾದ ಬೆಳೆ ಪರಿಹಾರಕ್ಕೆ ಅರ್ಜಿ ಹಾಕಿ 9 ತಿಂಗಳು ಕಳೆದಿದೆ. ಆದರೆ ಇದುವರೆಗೆ ನಮಗೆ ಯಾವುದೇ ಪರಿಹಾರ ಬಂದಿಲ್ಲ. ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಆದರೆ ಸಾಲಕ್ಕೆ ಬಡ್ಡಿಯನ್ನು ಕಟ್ಟಲು ಆಗುತ್ತಿಲ್ಲ. ಸಂಬಂಧ ಪಟ್ಟ ಅರಣ್ಯ ಇಲಾಖೆಯವರು ಆದಷ್ಟು ಬೇಗ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾತನಾಡಿ, ನೀವು ಅರ್ಜಿ ಕೊಟ್ಟ ತಕ್ಷಣ ನಾವು ಮಹಜರ್ ಮಾಡಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಕೊಟ್ಟಿದ್ದೇವೆ. ಹಲವಾರು ರೈತರಿಗೆ ಬೆಳೆ ಪರಿಹಾರ ಬಂದಿಲ್ಲ. ಇನ್ನೊಮ್ಮೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸಲಾಗುವುದು ಎಂದರು.ರೈತ ಮುಖಂಡ ಮಾದಪ್ಪ ಮಾತನಾಡಿ, ರಾಮನ ಗುಡ್ಡ ಹಾಗೂ ಹುಬ್ಬೆ ಹುಣಸೆ ಜಲಾಶಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾವೇರಿ ನದಿಯಿಂದ ನೀರು ತುಂಬಿಸಬೇಕು. ಈಗಾಗಲೇ ಕೆರೆ ತುಂಬಿಸುವ ಕಾಮಗಾರಿ ಸ್ಥಗಿತವಾಗಿ ಮೂರು ವರ್ಷವಾಗಿರುವುದರಿಂದ ಕೋಟ್ಯಂತರ ರು. ಅನುದಾನ ವ್ಯರ್ಥವಾಗುತ್ತಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು, ಹನೂರು ಪಟ್ಟಣ ವ್ಯಾಪ್ತಿಯ 13ನೇ ವಾರ್ಡಿನಲ್ಲಿ ಸಮರ್ಪಕ ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಕೊಳಚೆ ನೀರು ಮನೆ ಮುಂದೆ ನಿಲ್ಲುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ 13ನೇ ವಾರ್ಡಿನ ಜನತೆ ತೊಂದರೆಗೊಳಗಾಗಿದ್ದಾರೆ, ಪಪಂಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ನೀವು ಸೂಕ್ತ ಕ್ರಮ ವಹಿಸಬೇಕು ಎಂದರು.
ಈ ವೇಳೆ ಪಪಂ ಮುಖ್ಯ ಅಧಿಕಾರಿ ಅಶೋಕ್ ಮಾತನಾಡಿ, ಕಚೇರಿಯಲ್ಲಿ ಕಾಯಂ ನೌಕರರು ಇಲ್ಲದೆ ಇರುವ ಪರಿಣಾಮ ಸಮಸ್ಯೆಯಾಗಿದೆ. ಈ ಸಂಬಂಧ ಶಾಸಕರ ಜೊತೆ ಚರ್ಚೆ ನಡೆಸಿದ್ದು, ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಇನ್ನು ಕ್ಷೇತ್ರ ವ್ಯಾಪ್ತಿಯ ಹಲವಾರು ರೈತರು ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಇಲ್ಲದೆ ಇರುವುದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ, ಸಮರ್ಪಕ ಮಳೆ ಇಲ್ಲದೆ ಇರುವುದರಿಂದ ಇರುವ ನೀರನ್ನು ಬಳಸಿಕೊಳ್ಳಲು ವಿದ್ಯುತ್ ಇಲ್ಲದೆ ಇರುವುದರಿಂದ ಬೆಳೆಗಳೆಲ್ಲ ಒಣಗುತ್ತಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೆಸ್ಕಾಂ ಇಲಾಖೆಯ ಜೆಇ ರಂಗಸ್ವಾಮಿ ಅವರಿಗೆ ತಿಳಿಸಿದರು.ಜೆಇ ರಂಗಸ್ವಾಮಿ ಮಾತನಾಡಿ, ವಿದ್ಯುತ್ ಪರಿವರ್ತಕಗಳು ದುರಸ್ತಿ ಆಗಿರುವುದು ಗಮನಕ್ಕೆ ತಂದ ತಕ್ಷಣ ಬದಲಾಯಿಸಿ ಕೊಡಲಾಗುತ್ತಿದೆ ಮನವಿ ಸಲ್ಲಿಸಿದರೆ ಸೂಕ್ತ ಕ್ರಮ ವಹಿಸಲಾಗುವುದು. ಕೆಲವು ಗ್ರಾಮಗಳಲ್ಲಿ ವಿದ್ಯುತ್ ವೈರ್‌ಗಳು ನೇತಾಡುತ್ತಿರುವುದರಿಂದ ಎರಡು ಕೋಟಿ ವೆಚ್ಚದಲ್ಲಿ ಕೇಬಲ್ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರೈತರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಬಂದರೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು ಶಾಲಾ ಕಾಲೇಜು ಸಮಯಕ್ಕೆ ಬಾರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ದೀಪ ವ್ಯವಸ್ಥಾಪಕರು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದರು. ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಳ್ಳ ಕೊಳ್ಳಗಳಿಂದ ಗುಂಡಿ ಬಿದ್ದಿದೆ. ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರದ ಗಮನಸೆಳೆದು ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಎಇಇ ಚಿನ್ನಣ್ಣ ಅವರಿಗೆ ತಿಳಿಸಲಾಯಿತು.
ತಹಸೀಲ್ದಾರ್ ಕಚೇರಿಯಲ್ಲಿರುವ ಸಿಬ್ಬಂದಿ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತಾವು ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ಕೆಲಸ ಕಾರ್ಯಗಳಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಹನೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಚರ್ಚೆ ನಡೆಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನೆಯಲ್ಲಿ ತಾಲೂಕು ಸಂಘದ ಅಧ್ಯಕ್ಷ ಚಂಗಡಿ ಕರಿಯಪ್ಪ, ಹನೂರು ಘಟಕದ ಅಧ್ಯಕ್ಷ ಮಾದಪ್ಪ, ಕಾರ್ಯದರ್ಶಿ ಶಾಂತಕುಮಾರ್, ಪದಾಧಿಕಾರಿಗಳಾದ ಪ್ರಕಾಶ್, ಶಶಿ ರಾಜು ವಿನೇಶ್ ಸೇರಿದಂತೆ ನೂರಕ್ಕೂ ಹೆಚ್ಚು ರೈತ ಮುಖಂಡರು ಪಾಲ್ಗೊಂಡಿದ್ದರು.