ಕೊಡಗಿನ ಪಾಳು ಭತ್ತ ಗದ್ದೆ ಪುನಶ್ಚೇತನಕ್ಕೆ ಕನೆಕ್ಟಿಂಗ್ ಕೊಡವಾಸ್, ಕೃಷಿ ವಿಜ್ಞಾನ ವೇದಿಕೆ ಪ್ರೋತ್ಸಾಹ

| Published : Sep 27 2024, 01:26 AM IST

ಕೊಡಗಿನ ಪಾಳು ಭತ್ತ ಗದ್ದೆ ಪುನಶ್ಚೇತನಕ್ಕೆ ಕನೆಕ್ಟಿಂಗ್ ಕೊಡವಾಸ್, ಕೃಷಿ ವಿಜ್ಞಾನ ವೇದಿಕೆ ಪ್ರೋತ್ಸಾಹ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಭತ್ತದ ಗದ್ದೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಂಘಟನೆಯೊಂದು ಮುಂದಾಗಿದೆ. ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಈ ಕಾರ್ಯ ಕೈಗೆತ್ತಿಕೊಂಡಿದೆ. ಇದಕ್ಕೆ ಕೊಡಗು ಕೃಷಿ ವಿಜ್ಞಾನ ವೇದಿಕೆ ಸಾಥ್ ನೀಡಿದ್ದು, ಜಿಲ್ಲೆಯಲ್ಲಿ ಭತ್ತದ ಗದ್ದೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವರ ಹಬ್ಬಗಳಲ್ಲಿ ಭತ್ತದ ಗದ್ದೆಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಇಂದು ಭತ್ತದ ಗದ್ದೆಗಳು ಬಹುತೇಕ ಮಾಯವಾಗಿದ್ದು, ಅಪಾರ ಮಂದಿ ಗದ್ದೆಗಳನ್ನು ಪಾಳುಬಿಟ್ಟಿದ್ದಾರೆ. ಆದ್ದರಿಂದ ಭತ್ತದ ಗದ್ದೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಂಘಟನೆಯೊಂದು ಮುಂದಾಗಿದೆ.

ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಈ ಕಾರ್ಯ ಕೈಗೆತ್ತಿಕೊಂಡಿದೆ. ಇದಕ್ಕೆ ಕೊಡಗು ಕೃಷಿ ವಿಜ್ಞಾನ ವೇದಿಕೆ ಸಾಥ್ ನೀಡಿದ್ದು, ಜಿಲ್ಲೆಯಲ್ಲಿ ಭತ್ತದ ಗದ್ದೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಜಿಲ್ಲೆಯಲ್ಲಿ ಹಿಂದೆ ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಕಾರ್ಮಿಕರ ಕೊರತೆ, ಕಾಡಾನೆ ಹಾವಳಿ, ಅಕಾಲಿಕ ಮಳೆ ಸೇರಿದಂತೆ ನಾನಾ ಕಾರಣದಿಂದಾಗಿ ಭತ್ತದ ಕೃಷಿಯಿಂದ ಕೃಷಿಕರು ವಿಮುಖವಾಗುತ್ತಿದ್ದಾರೆ. ಇದರಿಂದಲೇ ಸಾವಿರಾರು ಹೆಕ್ಟೇರ್ ಪ್ರದೇಶದ ಭತ್ತದ ಗದ್ದೆಗಳನ್ನು ಪಾಳುಬಿಟ್ಟಿದ್ದಾರೆ.

ಆರಂಭದಲ್ಲಿ ಎಲ್ಲರೂ ಕುಟುಂಬದೊಂದಿಗೆ ಸೇರಿ ಭತ್ತದ ನಾಟಿ ಕಾರ್ಯ ಮಾಡುತ್ತಿದ್ದರು. ಆದರೆ ಇಂದು ಅಂತಹ ಚಿತ್ರಣವೇ ಕೊಡಗಿನಲ್ಲಿ ಮರೆಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಅನ್ನಕ್ಕಾಗಿ ಮಾತ್ರವಲ್ಲದೆ ನೀರಿಗಾಗಿಯೂ ಭತ್ತದ ಕೃಷಿ ಮಾಡಲು ಈ ಸಂಘಟನೆಗಳು ಮುಂದಾಗಿವೆ. ಕೊಡಗಿನ ಗದ್ದೆಗಳಲ್ಲಿ ಬೇಸಾಯ ಮಾಡಿದರೆ ವರ್ಷವಿಡೀ ಗದ್ದೆಯಲ್ಲಿ ನೀರು ಇರುವ ಮೂಲಕ, ಭೂಮಿಗೆ ನೀರು ಇಂಗುವ ಮೂಲಕ ಜಲಮೂಲ ವೃದ್ಧಿಯಾಗುತ್ತದೆ, ಕಾವೇರಿ ನದಿಯ ಹರಿವೂ ಹೆಚ್ಚುತ್ತದೆ ಎಂಬುದು ವೈಜ್ಞಾನಿಕ ತತ್ವವಾಗಿದೆ.

ಆನೆ-ಮಾನವ ಸಂಘರ್ಷ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇದರಿಂದ ಭತ್ತದ ಕೃಷಿ ಮಾಡಲು ರೈತರಿಗೆ ಸಂಕಷ್ಟ ಉಂಟಾಗಿದೆ. ಯುವ ಕೃಷಿಕರು ಮುಂದೆ ಬರಬೇಕು. ಕೊಡಗಿನ ಸಮಗ್ರ ಕೃಷಿ ಉಳಿದರೆ ಮಾತ್ರ ಭವಿಷ್ಯದ ಉಳಿವು ಎಂದು ಸಂಘಟನೆಯ ಪ್ರಮುಖರು ಹೇಳುತ್ತಾರೆ.

ಪ್ರೋತ್ಸಾಹಧನ ಆಕರ್ಷಣೆ:

5-10 ವರ್ಷದಿಂದ ಪಾಳುಬಿಟ್ಟಿರುವ ಭತ್ತದ ಗದ್ದೆಗಳನ್ನು ಪುನಶ್ಚೇತನ ಮಾಡುವ ಸಲುವಾಗಿ ಎಕರೆಗೆ ರು.10 ಸಾವಿರ ಪ್ರೋತ್ಸಾಹವಾಗಿ ರೈತರಿಗೆ ನೀಡಲಾಗುತ್ತಿದೆ. ಪ್ರತ್ಯೇಕವಾಗಿ ರೈತರಿಗೆ ನೀಡುವುದಿಲ್ಲ. ಬದಲಾಗಿ 25-30 ಎಕರೆ ಹೊಂದಿದ ಕೂಡು ಕುಟುಂಬಗಳು ಪಾಳುಬಿಟ್ಟಿರುವ ಗದ್ದೆಗಳಲ್ಲಿ ಭತ್ತದ ಕೃಷಿ ಆರಂಭಿಸಿದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕುಶಾಲಪ್ಪ ಮಾಹಿತಿ ನೀಡಿದರು.

ಅಗ್ರಿ ಟೂರಿಸಂ:

ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಗ್ರಿ ಟೂರಿಸಂಗೆ ಕೊಡಗು ಜಿಲ್ಲೆಯಲ್ಲಿ ಪೂರಕ ವಾತಾವರಣವಿದೆ. ಆದ್ದರಿಂದ ಪ್ರಯತ್ನವನ್ನು ಪ್ರಾರಂಭಿಸಲಾಗಿದೆ. ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಪ್ರವಾಸೋದ್ಯಮಿಗಳೇ ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ. ಪ್ರವಾಸೋದ್ಯಮಿಗಳು ತಮ್ಮ ಸಿಎಸ್ಆರ್ ನಿಧಿ ಮೂಲಕ ಹಣ ನೀಡುತ್ತಿದ್ದಾರೆ. ಭತ್ತದ ಕೃಷಿ ಉಳಿದರೆ ಕೊಡಗು ಉಳಿಯುತ್ತದೆ ಎಂಬುವನ್ನು ತಿಳಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಸ್ಥೆ ಮುಂದಾಗಿದೆ.

.................15 ವರ್ಷ ಪಾಳು ಬಿಟ್ಟ ಗದ್ದೆಯಲ್ಲಿ ನಾಟಿ!

ವಿರಾಜಪೇಟೆ ತಾಲೂಕಿನ ತಾಲೂಕಿನ ಬೊಳ್ಳರಿಮಾಡುವಿನಲ್ಲಿ ಪುಟ್ಟಿಚಂಡ ಕುಟುಂಬಕ್ಕೆ ಸೇರಿದ ಸುಮಾರು 30 ಎಕರೆ ಭತ್ತದ ಗದ್ದೆ ಕಳೆದ 15 ವರ್ಷದಿಂದ ಪಾಳುಬಿದ್ದಿತ್ತು. ವಿವಿಧ ಕಾರಣಗಳಿಂದಾಗಿ ಗದ್ದೆಯಲ್ಲಿ ಯಾವುದೇ ಕೃಷಿ ಮಾಡಲಾಗದೆ ಕಾಡು ಬೆಳೆದಿತ್ತು. ಇದೀಗ ಅದನ್ನು ಸ್ವಚ್ಛಗೊಳಿಸಿ ಈ ವರ್ಷ ನಾಟಿ ಕಾರ್ಯ ಮಾಡಲಾಗಿದೆ. ಇದರಿಂದ ಪುಟ್ಟಿಚಂಡ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗದ್ದೆಗಳಲ್ಲಿ ನಾಟಿ ಕಾರ್ಯ ಮಾಡುವ ಮೂಲಕ ಭತ್ತದ ಕೃಷಿಗೆ ಕೊಡಗಿನಲ್ಲಿ ಪುನರ್ ಜೀವನ ನೀಡಲು ಸಂಘಟನೆ ಕೆಲಸ ಮಾಡುತ್ತಿದೆ.

.....................ಇಂದು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲು ಕೊಡಗಿನಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿರುವುದು ಪ್ರಮುಖ ಕಾರಣ. ಭವಿಷ್ಯದ ದೃಷ್ಟಿಯಿಂದ ನಾವು ಭತ್ತದ ಕೃಷಿ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಈಗಾಗಲೇ ಭತ್ತದ ಕೃಷಿ ಪುನಶ್ಚೇತನಗೊಳಿಸಲು ಬೊಳ್ಳರಿಮಾಡುವಿನಲ್ಲಿ 30 ಎಕರೆಯಲ್ಲಿ ನಾಟಿ ಕಾರ್ಯ ಮಾಡಲಾಗಿದೆ. ಕೊಡಗಿನಲ್ಲಿ ಅಗ್ರಿ ಟೂರಿಸಂಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

-ಡಾ. ಸಿ.ಜೆ. ಕುಶಾಲಪ್ಪ, ಅಧ್ಯಕ್ಷರು, ಕೊಡಗು ಕೃಷಿ ವಿಜ್ಞಾನ ವೇದಿಕೆ.

...............

ಕೊಡವರ ಪ್ರತಿಯೊಂದು ಹಬ್ಬಗಳಲ್ಲಿ ಭತ್ತದ ಗದ್ದೆಗಳು ಪ್ರಮುಖ ಪಾತ್ರವಹಿಸಿದೆ. ಹುತ್ತರಿ, ಕೈಲ್ ಮುಹೂರ್ತ ಹಬ್ಬಗಳು ಕೃಷಿಗೆ ಪೂರಕವಾಗಿದೆ. ನಮ್ಮ ಮೂಲ ಭತ್ತದ ಕೃಷಿಯಾಗಿದೆ. ಆದ್ದರಿಂದ ಇದನ್ನು ಮತ್ತೆ ಪುನಶ್ಚೇತನಗೊಳಿಸಲು ಹಾಗೂ ನೀರಿನ ಮೂಲ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಸಂಘಟನೆ ಮೂಲಕ ಪಾಳುಬಿಟ್ಟ ಗದ್ದೆಗಳಲ್ಲಿ ನಾಟಿ ಮಾಡಲಾಗುತ್ತಿದೆ.

-ನಿರಣ್ ನಾಚಪ್ಪ, ಅಧ್ಯಕ್ಷ ಕನೆಕ್ಟಿಂಗ್ ಕೊಡವಾಸ್.