ಸಾರಾಂಶ
- ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಆಗ್ರಹ - - - ಕನ್ನಡಪ್ರಭ ವಾರ್ತೆ ಹರಿಹರ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ನಗರದ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.
ತಾಲೂಕು ಘಟಕದ ಪದಾಧಿಕಾರಿಗಳು ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲ ಸೌಲಭ್ಯ ಹಾಗೂ ಸೇವಾ ಸೌಲಭ್ಯ ಒದಗಿಸಲು ಮತ್ತು ಮೊಬೈಲ್ ಆಪ್‍ಗಳಲ್ಲಿ ನಿರಂತರ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡ ಸ್ಥಗಿತಗೊಳಿಸಬೇಕು ಎಂದರು.ಸಿ-ವೃಂದದ ನೌಕರರಾದ ನಮಗೆ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿ ವಹಿಸಲಾಗಿದೆ. ಆದ್ದರಿಂದ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು. ಕೆಲಸದ ಒತ್ತಡಕ್ಕೆ ತಕ್ಕಂತೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ, ಅಲ್ಮೆರಾ, ಗುಣಮಟ್ಟದ ಮೊಬೈಲ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್ ಅಥವಾ ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಒದಗಿಸಬೇಕು ಎಂದು ಮನವಿ ಮಾಡಿದರು.
ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಅಮಾನತುಗಳನ್ನು ತಕ್ಷಣ ರದ್ದುಪಡಿಸಬೇಕು. ಕೆಸಿಎಸ್‍ಆರ್ ನಿಯಮದಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು. ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.ಸಂಘದ ತಾಲೂಕು ಗೌರವಾಧ್ಯಕ್ಷ ಎಚ್.ಜಿ. ಹೇಮಂತ್, ಅಧ್ಯಕ್ಷ ಬೋರಯ್ಯ, ಉಪಾಧ್ಯಕ್ಷ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ಸಹಕಾರ್ಯದರ್ಶಿ ಮಾರುತಿ, ಸಾಂಸ್ಕøತಿಕ ಕಾರ್ಯದರ್ಶಿ ಸೌಮ್ಯ, ಹರಿಹರ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಹಾಗೂ ಇತರರು ಭಾಗವಹಿಸಿದ್ದರು.
- - - -26ಎಚ್‍ಆರ್‍ಆರ್4:ಹರಿಹರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಹರಿಹರ ತಾಲೂಕು ಕಚೆರಿ ಎದುರು ಧರಣಿ ನಡೆಸಿದರು.