ಸಾರಾಂಶ
- ಆನಗೋಡು ವಿಜಯ ಬ್ಯಾಂಕ್ ವ್ಯವಸ್ಥಾಪಕರಿಂದ ದುಂಡಾವರ್ತನೆ । ಸಿಎಂ ಸೂಚನೆಗೆ ಕಿಮ್ಮತ್ತಿಲ್ಲವೆ?: ಹುಚ್ಚವ್ವನಹಳ್ಳಿ ಮಂಜುನಾಥ ಆಕ್ರೋಶ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ತಾಲೂಕಿನ ಆನಗೋಡು ಗ್ರಾಮದ ವಿಜಯ ಬ್ಯಾಂಕ್‌ನಲ್ಲಿ ಮಹಿಳಾ ಗ್ರಾಹಕರ ಸಾಮಾಜಿಕ ಭದ್ರತೆ, ಸಬ್ಸಿಡಿ ಹಣವನ್ನು ಸಾಲದ ಹಣಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬ್ಯಾಂಕ್ ವ್ಯವಸ್ಥಾಪಕರ ಈ ಕ್ರಮ ದುಂಡಾವರ್ತನೆಯಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರದ ಸೂಚನೆ ಪುರಸ್ಕರಿಸದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಸಾಲಕ್ಕೆ ಸರ್ಕಾರದ ವಿವಿಧ ಯೋಜನೆ ಹಣ, ಸಬ್ಸಿಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದಂತೆ ಒತ್ತಾಯಿಸಿ ಮೇ 20ರಂದು ದಾವಣಗೆರೆ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕಿನ ಹೊನ್ನೂರು ಗ್ರಾಮದ ನಾಗಮ್ಮ ಕೋಂ ರಮೇಶ ಎಂಬ ಮಹಿಳೆಗೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ₹35 ಸಾವಿರ ಸಹಾಯಧನ, ₹65 ಸಾವಿರ ಸಾಲ ಸೇರಿದಂತೆ ₹1 ಲಕ್ಷ ಪಡೆದಿದ್ದರು. ಈಗಾಗಲೇ ₹50 ಸಾವಿರ ಸಾಲ ಮರು ಪಾವತಿಸಿದ್ದಾರೆ. ಉಳಿದ ₹15 ಸಾವಿರ ಕಾರಣಾಂತರದಿಂದ ಕಟ್ಟಲು ಆಗಿರಲಿಲ್ಲ. ಈಗ ₹15 ಸಾವಿರ ಹಣಕ್ಕೆ ಗೃಹಲಕ್ಷ್ಮಿ, ಉದ್ಯೋಗ ಖಾತ್ರಿ, ಅಂಗವಿಕಲರ ವೇತನ ಇತರೆ ಎಲ್ಲ ಬಗೆಯ ಸಬ್ಸಿಡಿ ಹಣವನ್ನು ಆನಗೋಡು ವಿಜಯ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ. ಇದು ಸರಿಯಾದ ಕ್ರಮವಲ್ಲ ಎಂದರು.ಗ್ರಾಹಕರೊಂದಿಗೆ ಉದ್ಧಟತನ:
ಆನಗೋಡು ಗ್ರಾಮದ ವಿಜಯ ಬ್ಯಾಂಕ್ ವ್ಯವಸ್ಥಾಪಕ ಕಳೆದ 6 ತಿಂಗಳಿನಿಂದಲೂ ಗ್ರಾಹಕರು, ಸಾರ್ವಜನಿಕರೊಂದಿಗೆ ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಸಾಕಷ್ಟು ಸಲ ರೈತರು, ಗ್ರಾಮೀಣರು, ಬ್ಯಾಂಕ್ ಗ್ರಾಹಕರು ತಿಳಿಹೇಳಿದರೂ ಬ್ಯಾಂಕ್ ವ್ಯವಸ್ಥಾಪಕ ತಮ್ಮ ವರ್ತನೆ ತಿದ್ದಿಕೊಳ್ಳುತ್ತಿಲ್ಲ. ಇದೀಗ ಬಡ ಮಹಿಳೆಯರಿಗೆ ಬಂದ ಹಣ, ಸಬ್ಸಿಡಿ ಹಣವನ್ನೂ ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ದೂರಿದರು.ಹೊನ್ನೂರಿನ ನಾಗಮ್ಮ ಕೋಂ ರಮೇಶ ತಮ್ಮ ₹15 ಸಾವಿರ ಸಾಲದ ಬಾಕಿಗೆ ಸಾಮಾಜಿಕ ಭದ್ರತೆ ಹಣವಾದ ಅಂಗವಿಕಲರ ಮಾಸಾಶನ, ಉದ್ಯೋಗ ಖಾತರಿ, ಗೃಹಲಕ್ಷ್ಮಿ ಯೋಜನೆ ಹಣವನ್ನಾಗಲೀ, ಸಬ್ಸಿಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದಂತೆ ಮನವಿ ಮಾಡಿದ್ದಾರೆ. ಆದರೆ, ಬ್ಯಾಂಕ್ ಶಾಖೆ ವ್ಯವಸ್ಥಾಪಕ ಅವರ ಮನವಿಗೆ ಕಿವಿಗೊಟ್ಟಿಲ್ಲ. ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಕರಿಗೆ ಸೌಜನ್ಯಕ್ಕೂ ಸ್ಪಂದಿಸಿಲ್ಲ, ಈ ಸಂಬಂಧ ಮಹಿಳೆ ಪರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ಹೊನ್ನೂರು ನಾಗಮ್ಮನವರಿಗೆ ನ್ಯಾಯ ಕೊಡಿಸಲು ರೈತ ಸಂಘ ಮತ್ತು ಹಸಿರು ಸೇನೆ ಮುಂದಾಗಿದೆ ಎಂದರು.
ಜಿಲ್ಲೆಯ ಅನೇಕ ಬ್ಯಾಂಕ್‌ಗಳಲ್ಲಿ ಹೀಗೆಯೇ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಸಾಮಾಜಿಕ ಭದ್ರತಾ ಯೋಜನೆ ಹಣ, ಗೃಹಲಕ್ಷ್ಮಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಕೂಲಿ ಹಣ, ಅಂಗವಿಕಲರ ಮಾಸಾಶನ, ವೃದ್ಧಪ್ಯಾ ವೇತನ, ವಿಧವಾ ವೇತನ ಹೀಗೆ ಯಾವುದನ್ನೂ ಬ್ಯಾಂಕ್‌ಗಳು ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ. ಈ ಕ್ರಮ ಉಲ್ಲಂಘನೆ ವಿರುದ್ಧ ದಾವಣಗೆರೆ ತಾಲೂಕಿನಿಂದಲೇ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ಆರಂಭಿಸುತ್ತಿದೆ ಎಂದು ಘೋಷಿಸಿದರು. ಅಲ್ಲದೇ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವ ಈ ರೈತರ ಹೋರಾಟದಲ್ಲಿ ಬ್ಯಾಂಕ್‌ಗಳಿಂದ ಬಾಧಿತರಾದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.- - -
ಕೋಟ್ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹ ಸಾಲದ ಖಾತೆಗೆ ಯಾವುದೇ ಯೋಜನೆ ಹಣವನ್ನು ಬ್ಯಾಂಕಿನವರು ಜಮಾ ಮಾಡಿಕೊಳ್ಳದಂತೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಆದರೂ, ರಾಜ್ಯದ ಬಹುತೇಕ ಬ್ಯಾಂಕ್‌ಗಳು ಈ ಸೂಚನೆಗೆ ಸ್ಪಂದಿಸುತ್ತಿಲ್ಲ- ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ-ಹಸಿರು ಸೇನೆ
- - - -19ಕೆಡಿವಿಜಿ4:ಹುಚ್ಚವ್ವನಹಳ್ಳಿ ಮಂಜುನಾಥ