ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಪ್ರತಿಭಟನೆ

| Published : Nov 25 2025, 02:45 AM IST

ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ನ್ಯಾಯಯುತವಾಗಿ ಜಮಾ ಆಗಬೇಕಾಗಿದ್ದ ಬೆಳೆ ವಿಮೆಯ ಹಣವನ್ನು ಇದುವರೆಗೂ ವಿಮಾ ಕಂಪನಿಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ.

ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಎಚ್ಚರಿಕೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಕೊಡಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ರೈತರ ಕೆಲಸ ಮಾಡಲು ರಾಜ್ಯದ ಸಚಿವರು ಮತ್ತು ಶಾಸಕರಿಗೆ ಸಮಯವಿಲ್ಲವೇ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸದಾನಂದ ಭಟ್ಟ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರಿಗೆ ನ್ಯಾಯಯುತವಾಗಿ ಜಮಾ ಆಗಬೇಕಾಗಿದ್ದ ಬೆಳೆ ವಿಮೆಯ ಹಣವನ್ನು ಇದುವರೆಗೂ ವಿಮಾ ಕಂಪನಿಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ. 2024 25ನೇ ಸಾಲಿನ ಬೆಳೆ ವಿಮೆ ರೈತರ ಖಾತೆಗಳಿಗೆ ನವೆಂಬರ್ ಮೊದಲ ವಾರದಲ್ಲಿಯೇ ಜಮಾ ಆಗಬೇಕಾಗಿತ್ತು. ಆದರೆ ರಾಜ್ಯ ಸರ್ಕಾರದ ಆಡಳಿತದ ನಿರ್ಲಕ್ಷ್ಯ ಮತ್ತು ವೈಫಲ್ಯದಿಂದಾಗಿ ಬಂದಿಲ್ಲ. ಗ್ರಾಪಂ ಮಟ್ಟದಲ್ಲಿನ ಎಡಬ್ಲ್ಯೂಎಸ್ ಯಂತ್ರಗಳ ಸರಿಯಾದ ನಿರ್ವಹಣೆ ಇಲ್ಲದಿರುವ ಕಾರಣ ಮಳೆ ಮತ್ತು ಹವಾಮಾನದ ಸ್ಪಷ್ಟವಾದ ಅಂಕಿ ಅಂಶ ದಾಖಲೀಕರಣ ಆಗುತ್ತಿಲ್ಲ. ವಿಮಾ ಪರಿಹಾರ ನೀಡಬೇಕಾದ ಸಂಸ್ಥೆ ಜವಾಬ್ದಾರಿಯಿಂದ ಜಾರಿಕೊಳ್ಳಲು ಇದು ಅನುವು ಮಾಡಿಕೊಡುವಂತಿದೆ. 2023-24ರಲ್ಲಿ ಇದೇ ಸಮಸ್ಯೆ ಎದುರಾದಾಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೋರಾಟದಿಂದ ಉತ್ತರ ಕನ್ನಡ ಜಿಲ್ಲೆಯ ಸುಮಾರು 40 ಸಾವಿರ ರೈತರಿಗೆ ವಿಮಾ ಪರಿಹಾರ ಸಿಕ್ಕಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ಮಳೆ ಮಾಪನ ಯಂತ್ರ ನಿರ್ವಹಣೆ ಮತ್ತು ದುರಸ್ತಿಗೆ ಇದುವರೆಗೂ ಕ್ರಮ ಕೈಗೊಳ್ಳದೇ ಇರುವುದು ರೈತರ ಹಿತರಕ್ಷಣೆಯಲ್ಲಿ ಯಾವ ರೀತಿಯ ಧೋರಣೆ ಹೊಂದಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಅಜಮಾಸು ₹100 ಕೋಟಿಗಿಂತಲೂ ಹೆಚ್ಚಿನ ವಿಮಾ ಹಣ ಜಮಾ ಆಗಬೇಕಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಧ್ವನಿಯತ್ತಿ ಡಿ. 15ರೊಳಗಾಗಿ ರೈತರಿಗೆ ಬೆಳೆವಿಮೆ ಮೊತ್ತ ಬಿಡುಗಡೆ ಮಾಡಿಸಲಿ. ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಿಸದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಸದಾನಂದ ಭಟ್ಟ ಎಚ್ಚರಿಸಿದರು.