ಹಾಸ್ಟೆಲ್‌ ಹೊರ ಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

| Published : Nov 25 2025, 02:45 AM IST

ಹಾಸ್ಟೆಲ್‌ ಹೊರ ಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ವೇತನ ಪರಿಷ್ಕರಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿರುವ ಮಾಸಿಕ ಕನಿಷ್ಠ ವೇತನ ತಕ್ಷಣ ಜಾರಿ ಮಾಡಬೇಕು.

ಹೊಸಪೇಟೆ: ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ವೇತನ ಪರಿಷ್ಕರಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿರುವ ಮಾಸಿಕ ಕನಿಷ್ಠ ವೇತನ ತಕ್ಷಣ ಜಾರಿ ಮಾಡಬೇಕು. ಕನಿಷ್ಠ ವೇತನ ತಿಂಗಳಿಗೆ ₹36 ಸಾವಿರ ನಿಗದಿ ಮಾಡಿ ಜಾರಿಗೊಳಿಸಬೇಕು. ಹೊರಗುತ್ತಿಗೆ ಪದ್ಧತಿ ರದ್ದು ಮಾಡಿ ಸರ್ಕಾರವೇ ನೇರವಾಗಿ ವೇತನ ಪಾವತಿ ಮಾಡಬೇಕು. ವಯೋ ನಿವೃತ್ತಿ 60 ವರ್ಷಗಳ ವರೆಗೆ ಎಲ್ಲ ಹೊರಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಿ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಇಲಾಖೆ ಕಾನೂನು ಪ್ರಕಾರ ಕಡ್ಡಾಯ ವಾರದ ರಜೆ, ಇಎಸ್ಐ ಮತ್ತು ಐಡಿ ಕಾರ್ಡ್, ಪಿಎಫ್ ತುಂಬಿದ ರಸೀದಿ, ವೇತನ ಚೀಟಿ, ಟೆಂಡರ್‌ದಾರರಿಂದ ಸರ್ವೀಸ್ ಸರ್ಟಿಫಿಕೇಟ್, ಆದೇಶ ಪತ್ರಕೊಡಬೇಕು. ಬಿ.ಸಿ.ಎಂ. ಇಲಾಖೆಯ ಬಾಲಕರ ಹಾಸ್ಟೆಲ್‌ಗಳಿಗೆ ಈ ಮೊದಲಿನಂತೆ ರಾತ್ರಿ ಕಾವಲುಗಾರರನ್ನು ನೇಮಕ ಮಾಡಿ ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಆದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿದ್ದ ನೌಕರರನ್ನು ಕಡಿಮೆ ಮಾಡಬೇಕೆಂಬುದನ್ನು ತಕ್ಷಣ ವಾಪಸ್ ಪಡೆದು, ಈ ಹಿಂದಿನಂತೆ ನೌಕರರ ಸಂಖ್ಯೆಯನ್ನು ಮುಂದುವರೆಸಬೇಕು. ನೇರ ನೇಮಕಾತಿಯಲ್ಲಿ ಕೆಲಸ ಕಳೆದುಕೊಂಡ ಎಲ್ಲಾ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ತಮ್ಮ ಅಧ್ಯಕ್ಷತೆಯಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ಕರೆದು, ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 15-20 ವರ್ಷಗಳಿಂದ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಸೆಕ್ಯೂರಿಟಿ ಗಾರ್ಡ್ ಮತ್ತು ಸ್ವಚ್ಛತಾಗಾರರಿಗೆ, ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲವೆಂಬ ಕಾರಣಕ್ಕೆ ಕಳೆದ 13 ತಿಂಗಳುಗಳ ಬಾಕಿ ವೇತನ ಪಾವತಿ ಮಾಡಿಲ್ಲ. ಹೊರಗುತ್ತಿಗೆ ನೌಕರರ ಸಂಕಷ್ಠದ ಬದುಕನ್ನು ಅರ್ಥ ಮಾಡಿಕೊಂಡು, ತಕ್ಷಣ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಕುಮಾರ್, ಎಸ್.ಸತ್ಯಮೂರ್ತಿ, ಎಂ.ಧನರಾಜ್, ಸೂರ್ಯನಾರಾಯಣ, ನಾಗೂ ನಾಯ್ಕ ಮತ್ತಿತರರಿದ್ದರು.