ಸೈಬರ್ ಅಪರಾಧ ತಡೆಗೆ ಜಾಗೃತಿ ಅಗತ್ಯ

| Published : Nov 25 2025, 02:45 AM IST

ಸಾರಾಂಶ

ಸಾಮಾಜಿಕ ಜಾಲತಾಣ ಬಳಸುವ ವಿದ್ಯಾರ್ಥಿ ಯುವ ಸಮೂಹ ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಬೇಕು

ಕುರುಗೋಡು: ಸಾಮಾಜಿಕ ಜಾಲತಾಣ ಬಳಸುವ ವಿದ್ಯಾರ್ಥಿ ಯುವ ಸಮೂಹ ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ಎಂ.ರಿಷಿಕೇಶ ಸಲಹೆ ನೀಡಿದರು.

ತಾಲೂಕಿನ ಇಲ್ಲಿನ ಬಾದನಹಟ್ಟಿ ಹೋಗುವ ಹೆದ್ದಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸೈಬರ್ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳು ಅಮಾಯಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಹೊಂಚುಹಾಕಿ ಕುಳಿತಿರುತ್ತಾರೆ. ಅಪರಾಧಗಳ ಕುರಿತು ಆತಂಕಗೊಳ್ಳುವ ಬದಲು ಪಾಸ್ವರ್ಡ್ ಭದ್ರತೆ ಕುರಿತು ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್‌ಗಳ ಹೆಸರಿನಲ್ಲಿ ಒಟಿಪಿ ಮಾಹಿತಿ ಪಡೆದುಕೊಳ್ಳುವ ಮೂಲಕ ಬ್ಯಾಂಕ್ ಖಾತೆಗಳಲ್ಲಿನ ಸೈಬರ್ ಅಪರಾಧಿಗಳು ಹಣ ದೋಚುತ್ತಾರೆ. ಅಪರಿಚಿತ ವ್ಯಕ್ತಿಗಳು ಕರೆಮಾಡಿದರೆ ಮಾಹಿತಿ ಹಂಚಿಕೊಳ್ಳಬೇಡಿ. ಬ್ಯಾಂಕ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಮೊಬೈಲ್ ಕರೆಮಾಡಿ ಮಾಹಿತಿ ಕೇಳುವುದಿಲ್ಲ. ಇದು ಅಪರಾಧಿಗಳ ಕೃತ್ಯವಾಗಿರುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶಾಂತಲಾ ಮಾತನಾಡಿ, ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿದ್ಯಾರ್ಥಿ ಯುವ ಸಮೂಕ ಮುಂಚೂಣಿಯಲ್ಲಿದೆ. ಬಳಕೆಯ ಸುರಕ್ಷತೆಯ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಮಾಹಿತಿ ತಂತ್ರಜ್ಞಾನ ಸಂಯೋಜಕ ಯು.ಎಂ. ರುದ್ರಮುನಿ ಶಾಸ್ತ್ರಿ, ಸಹಾಯಕ ಪ್ರಾಧ್ಯಾಪಕರಾದ ಜ್ಞಾನ ಪ್ರಸೂನಾಂಬ, ಮಧುಸೂದನ್, ಮುರಳಿ, ಶಂಕರಗೌಡ, ಶಶಿಕಾಂತ್ ಮತ್ತು ವೀರಲಿಂಗಪ್ಪ ಇದ್ದರು.

ಸೈಬರ್ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಸಂಪನ್ಮೂಲವ್ಯಕ್ತಿ ಎಂ.ರಿಷಿಕೇಶ ಉದ್ಘಾಟಿಸಿದರು.