------

ಕನ್ನಡಪ್ರಭ ವಾರ್ತೆ ಹುಣಸಗಿ

(ಕೆ) ತಳ್ಳಳ್ಳಿ ಗ್ರಾಮದಿಂದ ಹುಣಸಗಿ ತಾಲೂಕು ಕೇಂದ್ರಕ್ಕೆ ಹೋಗಿ ಬರಲು ಬಸ್ ಸೌಕರ್ಯ ಕಲ್ಪಿಸಿ ಕಾಲೇಜ್ ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಸಮಸ್ತ ಗ್ರಾಮಸ್ಥರಿಗೆ ಸಾರಿಗೆ ಸೌಕರ್ಯಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಯುವ ವಕೀಲ ಮಲ್ಲು ತಳ್ಳಳ್ಳಿ ಮಾತನಾಡಿ, (ಕೆ) ತಳ್ಳಳ್ಳಿ ಗ್ರಾಮವು ಹುಣಸಗಿ ತಾಲೂಕಿಗೆ ಸೇರ್ಪಡೆ ಆಗಿದೆ. ಕಂದಾಯ, ರೈತ ಸಂಪರ್ಕ ಕೇಂದ್ರ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಹಾಗೂ ಇತರ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಾಲೂಕು ಕೇಂದ್ರಕ್ಕೆ ಹೋಗಿ ಬರಲು ಬಸ್ ಸೌಕರ್ಯ ಇಲ್ಲದೆ ರೈತರು- ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರು ಸಂಕಟ ಪಡುವಂತಾಗಿದೆ ಎಂದು ತಿಳಿಸಿದರು.

ಸಮರ್ಪಕವಾಗಿ ಹುಣಸಗಿ ತಾಲೂಕಿಗೆ ಒಳಪಡದೆ ಇನ್ನೂ ಕೆಲವು ಇಲಾಖೆಗಳು ಸುರಪುರ ತಾಲೂಕಿನಲ್ಲಿಯೇ ಉಳಿದುಕೊಂಡಿವೆ. ಹೀಗಾಗಿ ಗ್ರಾಮಸ್ಥರು ಎರಡೂ ತಾಲೂಕುಗಳಿಗೆ ಅಲೆದಾಡಿ ಹರಸಹಾಸ ಪಡುವಂತಾಗಿದೆ. 2 ಕಿ.ಮೀ ನಡೆದುಕೊಂಡು ಕಚಕನೂರ ಕ್ರಾಸ್ ತಲುಪಬೇಕು, ಇಲ್ಲದೆ ಹೋದರೆ ಖಾಸಗಿ ವಾಹನಗಳಿಗೆ ಹಣ ಕೊಟ್ಟು ತಾಲೂಕು ಕೇಂದ್ರಕ್ಕೆ ತಲುಪುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ನಂತರ ಸುರಪುರ ಘಟಕ ವ್ಯವಸ್ಥಾಪಕರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.


ಈ ಸಂದರ್ಭ ಮುಖಂಡರಾದ ಬಸನಗೌಡ ಚೆನ್ನೂರು, ಬಲವಂತರಾಯ ಕಡಿಮನಿ, ಬಸ್ಸಣ್ಣ ಲಕ್ಕುಂಡಿ, ಶರಣಪ್ಪ ಗಾಯಕವಾಡ ನಗನೂರ, ಭೀಮಣ್ಣ ಕಡಿಮನಿ ಇದ್ದರು.

-----ಫೋಟೊ-------

26ವೈಡಿಆರ್9 :

(ಕೆ) ತಳ್ಳಳ್ಳಿ ಗ್ರಾಮದಿಂದ ಹುಣಸಗಿ ತಾಲೂಕು ಕೇಂದ್ರಕ್ಕೆ ಸಂಚರಿಸಲು ಬಸ್ ಸೌಕರ್ಯ ಕಲ್ಪಿಸಿ ಕಾಲೇಜ್ ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಸುರಪುರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.