ಹನುಮಸಾಗರ: ಪಟ್ಟಣಕ್ಕೆ ಶುದ್ಧ ಕುಡಿವ ನೀರನ್ನು ಸರಿಯಾಗಿ ಪೂರೈಕೆ ಮಾಡಬೇಕು ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.
ಇಲ್ಲಿನ ಪಪಂನಲ್ಲಿ ಮಂಗಳವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಇಂಜಿನೀಯರೊಂದಿಗೆ ಚರ್ಚಿಸಿ ಮಾತನಾಡಿದರು.ಪಟ್ಟಣದ ಗೋವಿಂದರಾಜ್ ದೇವಸ್ಥಾನ, ಗಾಂಧಿ ವೃತ್ತದ ಹತ್ತಿರ ಇರುವ ಏರ್ ಟ್ಯಾಂಕ್‌ಗಳಿಗೆ ಸರಿಯಾಗಿ ಶುದ್ಧ ನೀರು ಪೂರೈಕೆ ಆಗುತ್ತಿಲ್ಲ. ನೀರು ಪೂರೈಕೆಯಾಗುವ ಮುಖ್ಯ ಪೈಪ್‌ಲೈನ್ ತುಂಡಾಗಿದೆ.ಇದರ ಜತೆ ಕೆಲವು ವಾರ್ಡ್‌ಗಳಿಗೆ ನೀರು ಪೂರೈಕೆಯಾಗುವ ಪೈಪ್ ಲೈನ್‌ಗಳಲ್ಲಿ ಸಣ್ಣ ಕಲ್ಲು ಹೋಗಿರುವ ಸಾಧ್ಯತೆ ಇದ್ದು, ನೀರು ಕಿರಿದಾಗಿ ಬರುತ್ತಿದೆ.ಅದನ್ನು ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕದ ಇಂಜೀನೀಯರ್ ವಸಂತ ಮಾತನಾಡಿ, ಕಾರ್ಮಿಕರು ಕೆಲಸ ನಿಮಿತ್ತ ಹಳ್ಳಿಗಳಿಗೆ ತೆರಳಿದ್ದಾರೆ. ಅವರು ಆಗಮಿಸಿದ ತಕ್ಷಣ ಎಲ್ಲ ಕೆಲಸ ಅಚ್ಚುಕಟ್ಟಾಗಿ ಮಾಡಿಕೊಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕದ ಮೇಲ್ವಿಚಾರಕ ಅಮರೇಶ, ಪಪಂ ಸಿಬ್ಬಂದಿ ವೀರೇಶ ಕೂರ್ನಾಳ, ಮಹಾಂತಯ್ಯ ಕೋಮಾರಿ, ಚಂದಯ್ಯ ಹಿರೇಮಠ, ಸುಭಾಷ ಗುಮಗೇರಿ, ಮಂಗಳೇಶ ಹಿರೇಮನಿ, ಯಮನೂರು ಗುಡಿಮನಿ, ಪ್ರಭು ಪೂಜಾರಿ, ಯಮನೂರು ಚಿಮ್ಮಲಗಿ ಇತರರು ಇದ್ದರು.