ಕನ್ನಡಪ್ರಭ ವಾರ್ತೆ ಕುಮಟಾಸಮರ್ಪಕ ರಸ್ತೆ ವ್ಯವಸ್ಥೆ ಹಾಗೂ ಕುಡಿಯುವ ನೀರು ಪೂರೈಕೆಯಂತಹ ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿ ಕೋಡ್ಕಣಿಯ ಶಶಿಹಿತ್ಲ ಗ್ರಾಮಸ್ಥರು ಬುಧವಾರ ಸ್ಥಳೀಯ ಗ್ರಾಪಂ ಕಚೇರಿ ಎದುರು ಪ್ರತಿಭಟಿಸಿದರು.

ಕೋಡ್ಕಣಿ ಪಂಚಾಯಿತಿ ವ್ಯಾಪ್ತಿಯ ಶಶಿಹಿತ್ಲ ಮಜಿರೆಗೆ ಕಳೆದ ಎರಡು ವರ್ಷಗಳಿಂದ ನೀರು ಪೂರೈಕೆ ಹಾಗೂ ಸರಿಯಾದ ರಸ್ತೆಗಾಗಿ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಯಾರಿಂದಲೂ ನಮಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ, ಜನಪ್ರತಿನಿಧಿಗಳು ನೋಡಲು ಬರುತ್ತಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು, ಪಂಚಾಯಿತಿ ನಮಗೆ ಬೇಡ, ಮುಂದಿನ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿಯ ಕುಡಿಯುವ ನೀರಿನ ಪೂರೈಸುವ ಟ್ಯಾಂಕುಗಳಲ್ಲಿ ಕಾಗೆ, ಇಲಿಗಳು ಸತ್ತು ಬಿದ್ದಿವೆ. ಗ್ರಾಪಂ ಪಿಡಿಒ ಗೆ ಹೇಳಿದರೆ ಟ್ಯಾಂಕ್‌ ಸ್ವಚ್ಛಗೊಳಿಸಲು ಕ್ರಮ ವಹಿಸಿಲ್ಲ. ಆದ್ದರಿಂದ ನಮ್ಮ ಸಮಸ್ಯೆ ಬಗೆಹರಿಸುವುದಕ್ಕೆ ಸ್ಥಳಕ್ಕೆ ಉಪವಿಭಾಗಾಧಿಕಾರಿ, ತಹಸೀಲ್ದಾರ ಬಾರದ ಹೊರತು ಧರಣಿಯಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಒಂದೊಮ್ಮೆ ಅಧಿಕಾರಿಗಳು ಬರದಿದ್ದರೆ ಪಂಚಾಯಿತಿಗೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಸಿದರು. ಬಳಿಕ ತಾಪಂ ಇಒ ರಾಜೇಂದ್ರ ಭಟ್, ಸಿಪಿಐ ಯೋಗೇಶ, ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಇತರರು ಆಗಮಿಸಿ ಜನರ ಸಮಸ್ಯೆ ಆಲಿಸಿದರು. ಸೌಕರ್ಯಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ನಿಯಮಾನುಸಾರ ರಸ್ತೆ ಹಾಗೂ ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಇಒ ಆರ್.ಎಲ್. ಭಟ್, ಶಶಿಹಿತ್ಲ ಗ್ರಾಮವು ಪ್ರವಾಹ ಪೀಡಿತ ಗ್ರಾಮವಿದ್ದು ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿದ್ದೇವೆ. ರಸ್ತೆ ಸಮಸ್ಯೆ ಪರಿಹಾರಕ್ಕೆ ಸ್ಥಳೀಯರು ಸಹಕಾರ ನೀಡಿ ಭೂಮಿ ಬಿಟ್ಟುಕೊಡಬೇಕಾಗುತ್ತದೆ. ಸೇತುವೆಯೊಂದರ ಅಗತ್ಯವೂ ಇದೆ. ಈ ಬಗ್ಗೆ ಸದ್ಯವೇ ಸರ್ವೆ ನಡೆಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ನೀರು ಪೂರೈಕೆಗೂ ಈಗಾಗಲೇ ನಿರ್ಣಯವಾಗಿದ್ದು ಕ್ರಮ ವಹಿಸಲಾಗುವುದು ಎಂದರು.