ನಮ್ಮ ಗ್ರಾಮಗಳಲ್ಲೇ ವೃದ್ಧಾಪ್ಯ ವೇತನ ಕಲ್ಪಿಸಿ

| Published : May 25 2024, 12:52 AM IST

ಸಾರಾಂಶ

ಕಾಡು ಪ್ರಾಣಿಗಳ ಹಾವಳಿ ನಡುವೆ ಪಿಂಚಣಿ ಪಡೆಯಲು ಇಂಡಿಗನತ್ತ ಗ್ರಾಮಕ್ಕೆ ವೃದ್ಧರು ಕಾಡೊಳಗಿನ ಗ್ರಾಮಗಳಿಂದ ಬರಬೇಕಾಗಿದೆ. ಇದನ್ನು ತಪ್ಪಿಸಿ ನಾವು ವಾಸಿಸುವ ಗ್ರಾಮದಲ್ಲೇ ವ್ಯವಸ್ಥೆ ಕಲ್ಪಿಸುವಂತೆ ವೃದ್ಧಾಪ್ಯ ವೇತನ ಪಡೆಯುವ ವಯೋವೃದ್ಧರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜಿ. ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು ಕಾಡು ಪ್ರಾಣಿಗಳ ಹಾವಳಿ ನಡುವೆ ಪಿಂಚಣಿ ಪಡೆಯಲು ಇಂಡಿಗನತ್ತ ಗ್ರಾಮಕ್ಕೆ ವೃದ್ಧರು ಕಾಡೊಳಗಿನ ಗ್ರಾಮಗಳಿಂದ ಬರಬೇಕಾಗಿದೆ. ಇದನ್ನು ತಪ್ಪಿಸಿ ನಾವು ವಾಸಿಸುವ ಗ್ರಾಮದಲ್ಲೇ ವ್ಯವಸ್ಥೆ ಕಲ್ಪಿಸುವಂತೆ ವೃದ್ಧಾಪ್ಯ ವೇತನ ಪಡೆಯುವ ವಯೋವೃದ್ಧರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತೇಕಣೆ, (ನಾಗಮಲೆ ), ಪಡಸಲನತ್ತ ಗ್ರಾಮಗಳ 30ಕ್ಕೂ ಹೆಚ್ಚು ವಯೋವೃದ್ಧರು ದುರ್ಗಮ ಬೆಟ್ಟ ಗುಡ್ಡಗಳ ಅರಣ್ಯ ಪ್ರದೇಶದಲ್ಲಿ ಕಾಲು ದಾರಿಯಲ್ಲಿ 8 ಕಿಮೀ ಕ್ರಮಿಸಿ ಇಂಡಿಗನತ್ತ ಗ್ರಾಮದ ಅಂಚೆ ಕಚೇರಿ, ಬಳಿ ಪಿಂಚಣಿ ಪಡೆಯಲು ಜೀವದ ಹಂಗು ತೊರೆದು ವೃದ್ಧಾಪ್ಯ ವೇತನ ಪಡೆಯಲು ಹರ ಸಾಹಸ ಪಡುವಂತಾಗಿದೆ. ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ನಮ್ಮ ಗ್ರಾಮಗಳ ಬಳಿಯೇ ಅಧಿಕಾರಿಗಳು ಬಂದು ಪಿಂಚಣಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.

ದಟ್ಟ ಅರಣ್ಯ ಬೆಟ್ಟಗುಡ್ಡ:

ವಯಸ್ಸಾದ ನಮಗೆ ಕೋಲು ಹಿಡಿದು ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಕಲ್ಲು ಮಣ್ಣಿನ ಹಳ್ಳ ದಿಣ್ಣೆಗಳ ಬೆಟ್ಟ ಗುಡ್ಡಗಳ ಹಾದಿಯಲ್ಲಿ ಸಾಗುವುದು ತುಂಬಾ ಕಷ್ಟಕರವಾಗಿದೆ. ಇಂಡಿಗನತ್ತ ಗ್ರಾಮಕ್ಕೆ ಪಿಂಚಣಿ ಪಡೆಯಲು ಹರಸಾಹಸ ಪಡುವಂತಾಗಿದೆ. ಪಡಸಲನತ್ತ ಗ್ರಾಮದಿಂದ ಇಂಡಿನತ್ತ ಗ್ರಾಮಕ್ಕೆ 8 ಕಿಮೀ, ನಾಗಮಲೆ ಗ್ರಾಮದಿಂದ 5 ಕಿಮೀ. ದೂರ ಇರುವುದರಿಂದ ದುರ್ಗಮ ಅರಣ್ಯ ಪ್ರದೇಶದಲ್ಲಿ ಸಾಗಿ ಬರಬೇಕಾಗಿದೆ. ಸರ್ಕಾರ ನೀಡುವ ಪಿಂಚಣಿ ಹಣದಿಂದಲೇ ನಮ್ಮ ಬದುಕು ನಡೆಯುತ್ತಿದೆ. ಹೀಗಾಗಿ ಪಿಂಚಣಿಯನ್ನು ಗ್ರಾಮದಲ್ಲೇ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನಾಗರಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ:

ಇಂಡಿಗನತ್ತ ಗ್ರಾಮಕ್ಕೆ ಪಿಂಚಣಿ ಪಡೆಯಲು ಬರುವ ದುರ್ಗಮ ದಟ್ಟ ಅರಣ್ಯದ ಕಾಲು ದಾರಿಯಲ್ಲಿ ಜೀವದ ಹಂಗು ತೊರೆದು ನಮ್ಮ ಗ್ರಾಮದ ಎಲ್ಲರೂ ನಡೆದುಕೊಂಡೆ ಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳು ಎಲ್ಲಿ ಇರುತ್ತವೋ ಅದು ತಿಳಿಯದೆ ಜೀವ ಭಯದಲ್ಲೇ ಇಂಡಿಗನತ್ತ ಗ್ರಾಮಕ್ಕೆ ವೃದ್ಧಾಪ್ಯ ವೇತನ ಪಿಂಚಣಿ ಪಡೆಯಲು ಪ್ರತಿ ತಿಂಗಳು ಹರಸಾಹಸ ಪಡುವಂತಾಗಿದೆ. ಹೀಗಾಗಿ ನಮ್ಮ ಬದುಕು ಬವಣೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಕಾಡಿನಲ್ಲಿ ವಾಸಿಸುವ ನಮಗೆ ಪಿಂಚಣಿ ಪಡೆಯಲು ಬರುವ ವೇಳೆಯಲ್ಲಿ ಕಾಡುಪ್ರಾಣಿಗಳು ದಾಳಿ ಮಾಡಿದರೆ ನಮ್ಮ ಕುಟುಂಬದವರ ಗತಿ ಏನು ಎಂದು ವೃದ್ಧ ಪುರುಷರು ಮತ್ತು ಮಹಿಳೆಯರು ಮನವಿ ಮಾಡಿದ್ದಾರೆ.

ಗ್ರಾಮಗಳಲ್ಲೇ ಪಿಂಚಣಿ ವಿತರಿಸಲು ಮನವಿ:

ಪ್ರತಿ ತಿಂಗಳು ಪಿಂಚಣಿ ಪಡೆಯಲು ಇಂಡಿಗನತ್ತ ಗ್ರಾಮಕ್ಕೆ ಬಂದು ಹಣ ಪಡೆಯಲು ಎರಡು ದಿನಗಳು ನಮಗೆ ಬೇಕಾಗಿದೆ ವಯಸ್ಸಾಗಿರುವ ನಮಗೆ ನಮ್ಮ ಕಷ್ಟ ಅರಿತು ಸಂಬಂಧಪಟ್ಟ ಇಲಾಖೆ ಪಡಸಲನತ್ತ ಮತ್ತು ತೇಕಣೆ ಗ್ರಾಮಗಳ ಬಳಿಯೇ ಬಂದು ಅಂಚೆ ಇಲಾಖೆಯವರು ಹಣ ನೀಡುವಂತೆ ವ್ಯವಸ್ಥೆ ಕಲ್ಪಿಸುವಂತೆ ಪಡಸಲನತ್ತ ಗ್ರಾಮದ ದುಂಡಮ್ಮ, ಮಹದೇವಮ್ಮ, ಕೆಂಪಮ್ಮ, ಮಾದ ತಂಬಡಿ, ನಾಗಣ್ಣ ತಂಬಡಿ, ಪಾಪಣ್ಣ ತಂಬಡಿ, ದುಂಡಮ್ಮ ಸಾಕಮ್ಮ ಇನ್ನಿತರ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.

ಕಾಡಿನ ಕಾಲುದಾರಿಯಲ್ಲಿ ಕೋಲು ಹಿಡಿದು ನಡೆದುಕೊಂಡೆ ಪಡಸಲನತ್ತ ಗ್ರಾಮದಿಂದ ತೇಕಣೆ ಗ್ರಾಮದ ಮಾರ್ಗವಾಗಿ ತೆರಳಿ ಇಂಡಿಗನತ್ತ ಗ್ರಾಮಕ್ಕೆ 8 ಕಿ.ಮೀ ಬೆಟ್ಟ ಗುಡ್ಡ ಹತ್ತಿ ಹೋಗಿ ಸರ್ಕಾರದ ಪಿಂಚಣಿ ಪಡೆಯಬೇಕಾಗಿದೆ. ನನಗೆ 100 ವರ್ಷ ತುಂಬಿದೆ. ಹೀಗಾಗಿ ನನಗೆ ಇಳಿ ವಯಸ್ಸಿನಲ್ಲಿ ಇಷ್ಟು ದೂರ ನಡೆದುಕೊಂಡು ಹೋಗಿ ಹಣ ಪಡೆಯುವುದು ಕಷ್ಟ. ಸರ್ಕಾರ ಇತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಎಂದಾದರೂ ಕಾಡು ಪ್ರಾಣಿಗಳ ದಾಳಿಗೆ ನಾವು ಒಳಗಾಗುತ್ತೇವೆ. ದಯವಿಟ್ಟು ಗ್ರಾಮದಲ್ಲೇ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು. -ಮಾದ ತಂಬಡಿ, ನೂರರ ಅಜ್ಜ, ಪಡಸಲನತ್ತ

70 ವರ್ಷ ವಯಸ್ಸಾಗಿರುವ ನನಗೆ ಪಿಂಚಣಿ ಹಣ ಪಡೆಯಲು 8 ಕಿಮೀ ಕಾಡಿನಲ್ಲಿ ನಡೆದುಕೊಂಡೆ ಇಂಡಿಗನತ್ತ ಗ್ರಾಮಕ್ಕೆ ಬರಬೇಕಾಗಿದೆ. ಕಾಲು ನೋವಿದ್ದರೂ ಗ್ರಾಮದವರ ಜೊತೆಯಲ್ಲಿ ಬಂದು ಹಣ ಪಡೆದು ಗ್ರಾಮಕ್ಕೆ ಬಂದು 2-3 ದಿನ ಸುಧಾರಿಸಿಕೊಳ್ಳಬೇಕಿದೆ. ನಮ್ಮನ್ನು ಕಾಡು ಪ್ರಾಣಿಗಿಂತಲೂ ಕೀಳಾಗಿ ಕಾಣುವುದನ್ನು ಬಿಟ್ಟು ಮನುಷ್ಯರನ್ನಾಗಿ ಕಾಣಿ ನಮಗೆ ಸೌಲತ್ತು ಪಿಂಚಣಿ ಹಣ ಗ್ರಾಮದಲ್ಲೇ ವಿತರಿಸುವ ವ್ಯವಸ್ಥೆ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ. - ಮಾದಮ್ಮ, 70 ವರ್ಷ, ಪಡಸಲನತ್ತ

ಮುಂದಿನ ತಿಂಗಳಿನಿಂದ ತೇಕಣೆ ಗ್ರಾಮ ಹಾಗೂ ಪಡಸಲನತ್ತ ಗ್ರಾಮಕ್ಕೆ ತೆರಳಿ ಅಲ್ಲಿರುವ ವೃದ್ಧಾಪ್ಯ ವೇತನ ಪಡೆಯುವ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ. ಗ್ರಾಮಗಳಿಗೆ ತೆರಳಲು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಮುಂದಿನ ತಿಂಗಳಿನಿಂದ ಗ್ರಾಮದಲ್ಲಿ ವಿತರಿಸುತ್ತೇನೆ.-ಜೀವ, ಪೋಸ್ಟ್ ಮಾಸ್ಟರ್, ಇಂಡಿಗನತ್ತ