ನಡೆ- ನುಡಿ ಸಿದ್ಧಾತವಿಲ್ಲದ ಸಾಹಿತ್ಯ ಕ್ಷಣಿಕ: ಪ್ರೊ. ಸಿದ್ದರಾಯಮಯ್ಯ

| Published : May 25 2024, 12:52 AM IST

ನಡೆ- ನುಡಿ ಸಿದ್ಧಾತವಿಲ್ಲದ ಸಾಹಿತ್ಯ ಕ್ಷಣಿಕ: ಪ್ರೊ. ಸಿದ್ದರಾಯಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೋರಾಟ ಮತ್ತು ಬದುಕು ವಿಷ್ಣು ನಾಯ್ಕರ ಜೀವನದ ಎರಡು ನಾಣ್ಯದ ಒಂದು ಮುಖ.

ಅಂಕೋಲಾ: ನಡೆ- ನುಡಿ ಸಿದ್ಧಾಂತವಿಲ್ಲದೇ ಹುಟ್ಟಿದ ಸಾಹಿತ್ಯ ಎಂದಿಗೂ ಕ್ಷಣಿಕ. ನೈತಿಕ ಬದ್ಧತೆಯಿಂದ ಸತ್ಯ, ಶುದ್ಧತೆಯ ಕಾವ್ಯ ರಚಿಸಿದವರು ವಿಷ್ಣು ನಾಯ್ಕರು ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.

ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ನಡೆದ ನಾಡಿನ ನಾಮಾಂಕಿತ ಸಾಹಿತಿ, ಪ್ರಕಾಶಕ, ಸಂಘಟಕ, ಸಮಾಜವಾದಿ ಚಿಂತಕ ವಿಷ್ಣು ನಾಯ್ಕರ ಬದುಕು- ಬರಹಗಳ ವಿಚಾರಸಂಕಿರಣ ಅಮರ- ಅಂಬಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಷ್ಣು ನಾಯ್ಕರ ಸಾಹಿತ್ಯ ಓದಿದರೆ ಗಾಢವಾಗಿ ತಟ್ಟುವುದು ಹಸಿವು. ಅವರು ಬದುಕಿನ ಹಸಿವು ಹಾಗೂ ಸುತ್ತಲಿನ ಜನರ ಒಳಸಂಕಟಗಳ ಅರಿವಿನ ಭಾವದಿಂದ ಬರಹವನ್ನು ಬದುಕಾಗಿಸಿ ಹೋರಾಟಕ್ಕೆ ತೊಡಗಿದವರು. ಹೋರಾಟ ಮತ್ತು ಬದುಕು ವಿಷ್ಣು ನಾಯ್ಕರ ಜೀವನದ ಎರಡು ನಾಣ್ಯದ ಒಂದು ಮುಖ ಎಂದರು.

ವಿಷ್ಣು ನಾಯ್ಕರ ಆಯ್ದ ಕೃತಿಗಳನ್ನು ಜಿ.ಸಿ. ಕಾಲೇಜಿನ ಗ್ರಂಥಾಲಯಕ್ಕೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಸಂಘಟನೆ ರೂಪುರೇಷೆಗಳನ್ನು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮತ್ತು ವಿಷ್ಣು ನಾಯ್ಕ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ಹಿರಿಯ ಸಾಹಿತಿ ಶಾಂತಾರಾಮ ನಾಯಕ ಮಾತನಾಡಿ, ಜಿಲ್ಲೆಯ ಸಾಂಸ್ಕೃತಿಕ ನಾಯಕ ವಿಷ್ಣು ನಾಯ್ಕ. ಅವರೆಂದರೆ ಬೆರಗು ಮೂಡಿಸುವ ಸ್ಫೂರ್ತಿ. ತನ್ನೂರು ಅಂಬಾರಕೊಡ್ಲಾವನ್ನು ಸಾಹಿತ್ಯದ ಮೂಲಕ ಅಂಬಾರಕ್ಕೆ ಏರಿಸಿದವರು ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ಅಂಕೋಲಾದಲ್ಲಿ ಸಾಹಿತ್ಯ ಬಳಗವನ್ನು ಹುಟ್ಟು ಹಾಕಿದವರಲ್ಲಿ ವಿಷ್ಣು ನಾಯ್ಕ ಒಬ್ಬರು ಎಂದರು.

ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಅವರು, ಸಾಹಿತ್ಯದ ಮೂಲಕ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದವರು ವಿಷ್ಣು ನಾಯ್ಕ ಅವರು ಜಿಲ್ಲೆಯ ಹೆಮ್ಮೆ ಎಂದರು.

ವಿಷ್ಣು ನಾಯ್ಕರ ಪುತ್ರಿ ಅಮಿತಾ ನಾಯ್ಕ, ವಿಷ್ಣು ನಾಯ್ಕರ ಕವಿತೆಯನ್ನು ಹಾಡಿದರು. ಪತ್ರಕರ್ತ ಸುಭಾಸ್ ಕಾರೇಬೈಲ್ ಕಾರ್ಯಕ್ರಮ ನಿರೂಪಿಸಿದರು. ಕು. ಮಾನಸಾ ವಾಸರೆ ಪ್ರಾರ್ಥಿಸಿದರು. ಕಸಾಪದ ಪಿ.ಆರ್. ನಾಯ್ಕ ಸ್ವಾಗತಿಸಿದರು. ಕಸಾಪದ ಮೂರ್ತುಜಾ ಹುಸೇನ್ ಅತಿಥಿಗಳನ್ನು ಪರಿಚಯಿಸಿದರು. ಕಸಾಪ ಅಂಕೋಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ವಂದಿಸಿದರು. ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ, ಜಾರ್ಜ್ ಫರ್ನಾಂರ್ಡೀಸ್, ರಮಾನಂದ ನಾಯಕ, ಮಹೇಶ ಗೊಳಿಕಟ್ಟೆ, ರಾಜೇಶ್ ಮಾಸ್ತರ್, ರಾಮಕೃಷ್ಣ ಗುಂದಿ, ಮೋಹನ ಹಬ್ಬು, ನಾಗೇಂದ್ರ ನಾಯಕ ಸೇರಿದಂತೆ ಸಾಹಿತ್ಯ ಪ್ರೇಮಿಗಳು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.