ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ

| Published : Nov 18 2025, 12:02 AM IST

ಸಾರಾಂಶ

ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡಿ ಸಮಾಜಕ್ಕೆ ಮಾದರಿ ಪ್ರಜೆಗಳನ್ನಾಗಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಕರೆ ನೀಡಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡಿ ಸಮಾಜಕ್ಕೆ ಮಾದರಿ ಪ್ರಜೆಗಳನ್ನಾಗಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಕರೆ ನೀಡಿದರು. ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಹನುಮನಹಳ್ಳಿಯಲ್ಲಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಮಕ್ಕಳ ಚಲನ -ವಲನ ಕಂಡುಕೊಳ್ಳಬೇಕು. ಗುಣ ಮಟ್ಟದ ಶಿಕ್ಷಣ ಕಲಿಕೆಗೆ ಚಿಕ್ಕ ವಯಸ್ಸಿನಲ್ಲಿಯೇ ಪ್ರೇರೆಪಿಸಬೇಕು. ಸಮಾಜದಲ್ಲಿ ಉನ್ನತ ಸ್ಥಾನ ಮಾನ ತಂದು ಕೊಡುವ ಏಕೈಕ ಮಾರ್ಗವೆಂದರೆ ಅದು ಶಿಕ್ಷಣ, ಶಿಕ್ಷಣ ಎಲ್ಲ ಸಂಪತ್ತನ್ನು ತಂದು ಕೊಡುತ್ತದೆ. ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

ಹನುಮನಹಳ್ಳಿಯಲ್ಲಿ ಇಎಸ್‌ಐ ಆಸ್ಪತ್ರೆ ಘಟಕ ಸ್ಥಾಪಿಸಬೇಕು. ಕಾರ್ಮಿಕ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ ಅವರು ಇದೇ ಗ್ರಾಮದವರಾಗಿದ್ದು, ಇಎಸ್‌ಐ ಆಸ್ಪತ್ರೆ ಘಟಕ ಪ್ರಾರಂಭಿಸಲು ಸಹಕಾರ ನೀಡಬೇಕು. ಇದರಿಂದ ಈ ಭಾಗದ ಜನತೆಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ ಅವರು, ಇಲ್ಲಿನ ಸರ್ಕಾರಿ ಪ್ರೌಢಶಾಲೆ ಮಾದರಿ ಆಗಬೇಕಿದೆ. ಈ ಭಾಗದಲ್ಲಿ ಹಿಂದೆ ತೆಂಗು,ಅಡಿಕೆ, ಶೇಂಗಾ ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಈ ಭಾಗದಲ್ಲಿ ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ತೆಂಗಿನ ತೋಟಗಳು, ಮಳೆ ಇಲ್ಲದ ಕಾರಣ ಕಣ್ಮರೆಯಾಗಿವೆ. ಆದರೂ ರೈತರು ಸಾಲ ಸೂಲ ಮಾಡಿ ಭತ್ತ, ರಾಗಿ ಬೆಳೆ ತೊರೆದು ತೆಂಗು, ಅಡಿಕೆ ಬೆಳೆ ಬೆಳೆಯಲು ಅಧಿಕ ಒತ್ತು ನೀಡಿದ್ದಾರೆ. ಸಕಾಲಕ್ಕೆ ಮಳೆ ಬೆಳೆಯಾಗಿ ಇನ್ನಾದರೂ ಅಡಿಕೆ, ತೆಂಗು ಬೆಳೆಗಳನ್ನು ಬೆಳೆದು ರೈತರು,ಕೃಷಿಕರು ಆರ್ಥಿಕವಾಗಿ ಅಭಿವೃದ್ಧಿ ಕಾಣಲಿ ಎಂದು ಶುಭ ಕೋರಿದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ನಾವು ಹಳ್ಳಿ ಮಕ್ಕಳು ಎಂಬ ಕೀಳರಿಮೆ ಬಿಟ್ಟು ಉತ್ತಮ ಶಿಕ್ಷಣ ಕಲಿಕೆಗೆ ಮುಂದಾಗಬೇಕು. ಇಂದಿನ ಬಡತನ ನಾಳಿನ ಯಶಸ್ಸಿನ ಮೆಟ್ಟಿಲಾಗುತ್ತದೆ. ಹನುನಮನಹಳ್ಳಿಯಲ್ಲಿ ಸಾಕಷ್ಟು ಜನ ಪ್ರತಿಭಾವಂತರು ಜನಿಸಿದ್ದು, ಈ ಗ್ರಾಮದವರು 15 ಕ್ಕೂ ಅಧಿಕ ಮಂದಿ ವೈದ್ಯರಿದ್ದು. ಇನ್ನೂ ಅನೇಕ ರಂಗಗಳಲ್ಲಿದ್ದಾರೆ. ಈ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿರುವ ಗೋಪಾಲಕೃಷ್ಣ ಕುಟುಂಬವನ್ನು ಅಭಿನಂದಿಸಿದರಲ್ಲದೆ ಈ ಸಮುದಾಯ ಭವನ ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಲಿ ಎಂದರು.

ಕಾರ್ಮಿಕ ಇಲಾಖೆ ಆಯುಕ್ತ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಶ್ರೀರಾಮ ಶ್ರೀರಾಮ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್‌.ಕೆ.ಗೋಪಾಲಕೃಷ್ಣ, ನಂದಗೋಪಾಲ್‌, ವಕೀಲರಾದ ತಿಪ್ಪಯ್ಯಶೆಟ್ಟಿ, ದಯಾನಂದ, ಎಂಜಿನಿಯರಿಂಗ್‌ ಕಾಲೇಜಿನ ಉಪ ಪ್ರಾಂಶುಪಾಲ ರಾಮರಾಜು, ಮಧಮೇಹಿ ತಜ್ಞ ಡಾ.ಕಾಶಿನಾಥ್, ದೀಕ್ಷಿತ್ ಪ್ರೊ.ದೇಶ್‌ಮುಖ್‌ , ನಾಗರಾಜಯ್ಯ ಹಾಗೂ ಗ್ರಾಮಸ್ಥರು ಶಾಲಾ ಮಕ್ಕಳು ಇದ್ದರು.