ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಉತ್ತರ ಪ್ರದೇಶದಲ್ಲಿ ಅಡಕೆ ಮಾರಾಟದ ಮೇಲೆ ವಿಧಿಸುತ್ತಿರುವ ‘ಮಂಡಿ ತೆರಿಗೆ’ಯ ಪರಿಣಾಮ ಕರಾವಳಿ ಹಾಗೂ ಮಲೆನಾಡಿನ ಅಡಕೆ ಮಾರಾಟದ ಸಹಕಾರಿ ಸಂಘಗಳನ್ನು ಬಾಧಿಸತೊಡಗಿದೆ. ಇದರಿಂದಾಗಿ ಉತ್ತರ ಪ್ರದೇಶದಲ್ಲಿರುವ ಕರಾವಳಿ ಹಾಗೂ ಮಲೆನಾಡಿನ ಸಹಕಾರಿ ಸಂಘಗಳ ಶಾಖೆಗಳು ಮುಚ್ಚುವ ಹಂತಕ್ಕೆ ತಲುಪಿವೆ.
ಮಂಡಿ ತೆರಿಗೆ ಮನ್ನಾ ಮಾಡುವಂತೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಸಹಕಾರ ಸಂಘಗಳು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೈರಾಣಾಗಿವೆ. ಸುಮಾರು 10ಕ್ಕೂ ಅಧಿಕ ಮನವಿ ಪತ್ರಗಳು ಸಲ್ಲಿಕೆಯಾದರೂ ಸ್ಪಂದನ ಮಾತ್ರ ಶೂನ್ಯ. ಮುಖ್ಯಮಂತ್ರಿ ಯೋಗಿ ಆಗಿತ್ಯನಾಥ್ ಭೇಟಿಗೆ ಪ್ರಯತ್ನಿಸಿದರೂ ಅದು ಕೂಡ ಸಹಕಾರಿ ಸಂಘಗಳ ಧುರೀಣರಿಗೆ ಸಾಧ್ಯವಾಗುತ್ತಿಲ್ಲ. ಮಂಡಿ ತೆರಿಗೆ ವಸೂಲಿ ಯಥಾಪ್ರಕಾರ ಮುಂದುವರಿದಿದ್ದು, ಇದುವೇ ಪ್ರಸ್ತುತ ಸಹಕಾರಿ ಸಂಘಗಳ ಶಾಖೆಗಳ ಅವನತಿಗೆ ಕಾರಣವಾಗುತ್ತಿದೆ.ಶೇ.50ರಷ್ಟೂ ಅಡಕೆ ಖರೀದಿ ಆಗುತ್ತಿಲ್ಲ: 2021 ರಿಂದ ಉತ್ತರ ಪ್ರದೇಶದಲ್ಲಿ ‘ಮಂಡಿ ತೆರಿಗೆ’ ಪದ್ಧತಿ ಜಾರಿಗೆ ತರಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಅಡಕೆ ಬೆಳೆಗಾರರ ಸಹಕಾರಿ ಸಂಘಗಳು ನಿಯಮಾನುಸಾರ ಬಿಲ್ ಮೂಲಕವೇ ಅಡಕೆ ಮಾರಾಟ ಮಾಡುತ್ತಿವೆ. ಅಡಕೆ ಮಾರಾಟ ವೇಳೆ ಜಿಎಸ್‌ಟಿ ಮತ್ತು ಎಪಿಎಂಸಿ ತೆರಿಗೆ ಪಾವತಿಸುತ್ತವೆ. ನಂತರ ಅಡಕೆಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸುವಾಗ ಅಲ್ಲಿಯೂ ಮಂಡಿ ತೆರಿಗೆ ಪಾವತಿಸಬೇಕಾಗುತ್ತದೆ. ಆಗ ಜಿಎಸ್‌ಟಿ, ಎಪಿಎಂಸಿ ಶುಲ್ಕ ಹಾಗೂ ಮಂಡಿ ತೆರಿಗೆ ಸೇರಿ ಒಟ್ಟು ಅಡಕೆಯ ಮಾರಾಟ ಬೆಲೆಯಲ್ಲಿ ಹೆಚ್ಚಳವಾಗುತ್ತದೆ. ಮಾರಾಟ ಮೊತ್ತ ಹೆಚ್ಚಳಗೊಂಡಾಗ ಅಡಕೆಯನ್ನು ಖರೀದಿಸಲು ಅಲ್ಲಿನ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ.
ಕಳೆದ ಮೂರು ವರ್ಷಗಳಿಂದ ಅಲ್ಲಿ ಅಡಕೆ ಖರೀದಿಯ ಪ್ರಮಾಣ ಶೇ.50ರಷ್ಟು ಕಡಿಮೆಯಾಗಿದೆ. ಮಾತ್ರವಲ್ಲ ಉತ್ತರ ಪ್ರದೇಶದಲ್ಲಿರುವ ಇಲ್ಲಿನ ಸಹಕಾರಿ ಸಂಘಗಳ ಶಾಖೆಗಳನ್ನು ಮುಚ್ಚುವ ಪ್ರಮೇಯವೂ ಬಂದಿದೆ ಎನ್ನುತ್ತಾರೆ ಸಹಕಾರಿ ಸಂಘಗಳ ಮುಖ್ಯಸ್ಥರು.ಏನಿದು ‘ಮಂಡಿ ತೆರಿಗೆ?:
ಉತ್ತರ ಪ್ರದೇಶದಲ್ಲಿ ಹೊರಗಿನಿಂದ ಬಂದ ಅಡಕೆ ವ್ಯಾಪಾರಕ್ಕೆ ವಿಧಿಸುವ ತೆರಿಗೆಯೇ ‘ಮಂಡಿ ಟ್ಯಾಕ್ಸ್’. ಅಡಕೆ ಬೆಳೆಗೆ ಸಂಬಂಧಿಸಿ ಈಗಾಗಲೇ ಸಹಕಾರಿ ಸಂಘಗಳು ಜಿಎಸ್‌ಟಿ, ಎಪಿಎಂಸಿ ತೆರಿಗೆ ಪಾವತಿಸುತ್ತವೆ. ಮತ್ತೆ ಮಂಡಿ ತೆರಿಗೆ ಪಾವತಿಸುವುದು ಹೆಚ್ಚುವರಿ ಪ್ರತ್ಯೇಕ ತೆರಿಗೆ ಪಾವತಿಸಿದಂತೆ. ಒಟ್ಟು ಮೂರು ವಿಧದ ತೆರಿಗೆ ಪಾವತಿಸಿದರೆ ಅಡಕೆಯ ಮಾರಾಟ ದರ ಮತ್ತೆ ಹೆಚ್ಚಳವಾಗುತ್ತದೆ. ಈ ವೇಳೆ ಅಲ್ಲಿನ ಮಾರಾಟಗಾರರು ತೆರಿಗೆ ಪಾವತಿಸಿ ಮಾರಾಟ ಮಾಡುವ ಅಡಕೆಯನ್ನು ದರ ಹೆಚ್ಚಳ ಕಾರಣಕ್ಕೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ವಿದ್ಯಮಾನ ಸಹಕಾರಿ ಸಂಘಗಳಿಗೆ ಹಿನ್ನಡೆಯಾಗುತ್ತಿದೆ ಎನ್ನುವುದು ಸಹಕಾರಿ ಸಂಘಗಳ ಧುರೀಣರ ವಾದ. ಉತ್ತರ ಪ್ರದೇಶ ಹೊರತುಪಡಿಸಿದರೆ ಉತ್ತರ ಭಾರತದ ಬೇರೆ ರಾಜ್ಯಗಳಲ್ಲಿ ಮಂಡಿ ತೆರಿಗೆ ಇಲ್ಲ. ಹಾಗಾಗಿ ಸಹಕಾರಿ ಸಂಘಗಳು ಉತ್ತರ ಪ್ರದೇಶದ ಹೊರಗೆ ಅಡಕೆ ಮಾರುಕಟ್ಟೆ ಕಂಡುಕೊಳ್ಳಬೇಕಾದ ಪ್ರಮೇಯ ಬಂದೊದಗಿದೆ.ಮಂಡಿ ತೆರಿಗೆ ಕಾರಣ ಉತ್ತರ ಪ್ರದೇಶದ ವ್ಯಾಪಾರಿಗಳು ಸಹಕಾರಿ ಬದಲು ಖಾಸಗಿಯವರಿಂದ ಅಡಕೆ ಖರೀದಿಸುತ್ತಿದ್ದಾರೆ. ತೆರಿಗೆ ರಹಿತವಾಗಿ ವ್ಯಾಪಾರ ನಡೆಸಿ ಲಾಭ ಕಂಡುಕೊಳ್ಳುತ್ತಿರುವ ಮಂಡಿ ವ್ಯಾಪಾರಿಗಳು ಖಾಸಗಿಯವರಿಂದಲೇ ಅಡಕೆ ಖರೀದಿ ಇಷ್ಟಪಡುತ್ತಿದ್ದಾರೆ. .....................
ಉತ್ತರ ಪ್ರದೇಶದಲ್ಲಿ ಮಂಡಿ ತೆರಿಗೆ ವಿಧಿಸಿರುವುದರಿಂದ ಅಡಕೆ ಮಾರಾಟ ಬೆಲೆ ಹೆಚ್ಚಳವಾಗುತ್ತದೆ. ಕರಾವಳಿ, ಮಲೆನಾಡಿನ ಸಹಕಾರಿ ಸಂಘಗಳ ಅಡಕೆ ಖರೀದಿಗೆ ಅಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಅಲ್ಲಿನ ಮುಖ್ಯಮಂತ್ರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮತ್ತೆ ಯುಪಿ ಸಿಎಂ ಭೇಟಿಗೆ ಪ್ರಯತ್ನಿಸಲಾಗುತ್ತಿದೆ.-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ, ಮಂಗಳೂರು.