ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದ್ದು, ಆರೋಗ್ಯ ಸುಧಾರಿಸುವಲ್ಲಿ ಆಯುರ್ವೇದ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು.ನಗರದ ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ದ.ಕ ವತಿಯಿಂದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ - 2024ರಲ್ಲಿ ಅವರು ಮಾತನಾಡಿದರು.ರೋಗ ಬರದಂತೆ ಮುಂಜಾಗರೂಕತಾ ಕ್ರಮ ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ನಿತ್ಯದ ಜೀವನ ಸುಂದರವಾಗಿ ರೂಪಿಸಬೇಕಾದರೆ ಆರೋಗ್ಯ ಎನ್ನುವುದು ಬಹಳ ಮುಖ್ಯವಾಗಿದೆ. ಪ್ರಾಕೃತಿಕವಾಗಿ ಸಿಗುವ ಬೇರುಗಳನ್ನು ಉಪಯೋಗಿಸಿ ನೀಡುವ ಚಿಕಿತ್ಸೆಯಿಂದ ಉತ್ತಮ ಪಡೆಯಲು ಸಾಧ್ಯ ಎಂದರು.ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಮಾತನಾಡಿ, ಆಯುರ್ವೇದದಿಂದ ನಿಧಾನವಾಗಿ ರೋಗ ವಾಸಿಯಾಗುತ್ತೆ ಎಂದು ಹೇಳುತ್ತಾರೆ ಆದರೆ ಶೇ.ನೂರರಷ್ಟು ರೋಗ ವಾಸಿ ಮಾಡುವ ಶಕ್ತಿಯಿರುವುದು ಆಯುರ್ವೇದಕ್ಕೆ ಮಾತ್ರ. ಮೆಡಿಕಲ್ ಹಬ್ ಆಗಿರುವ ಮಂಗಳೂರಿನಲ್ಲಿ ಆಯುರ್ವೇದ ಆಸ್ಪತ್ರೆಯು ಉತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದ.ಕ ಜಿಲ್ಲೆಯ ಜತೆಗೆ ಹಲವು ಜಿಲ್ಲೆಗಳ ಜನರಿಗೆ ಉಪಯೋಗವಾಗುತ್ತಿದೆ ಎಂದರು.ಎಸ್‌ಡಿಎಂ ಆಯುರ್ವೇದ ಕಾಲೇಜು ಉಡುಪಿ ಇದರ ಪ್ರಾಂಶುಪಾಲೆ ಡಾ. ಮಮತಾ ಕೆ.ಪಿ. ಉಪನ್ಯಾಸ ನೀಡಿದರು. ಆಯುರ್ವೇದ ಎಂದರೆ ಜೀವನದಲ್ಲಿ ‘ಅಮ್ಮ’ನ ಪಾತ್ರ ಇದ್ದಂತೆ. ನಿಮ್ಮ ಪರಿಸರ, ವ್ಯವಸ್ಥೆ, ಆಚಾರದಲ್ಲಿ ಯಾವ ಆಹಾರ ಇದೆ ಅದನ್ನು ಯಾವ ರೀತಿ ತಿನ್ನಬೇಕು ಎನ್ನವುದು ಆಯುರ್ವೇದ ಶಾಸ್ತ್ರದಲ್ಲಿದೆ. ಹಿಂದಿನ ಕಾಲದಲ್ಲಿ ಮನೆಯ ಮದ್ದುಗಳನ್ನು ಮಕ್ಕಳಿಗೆ ನೀಡುವುದು ಸಾಮಾನ್ಯವಾಗಿತ್ತು, ಆದ್ದರಿಂದ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುವುದರ ಜತೆಗೆ ರೋಗದ ಪ್ರಮಾಣ ಕಡಿಮೆಯಾಗಿತ್ತು. ನಮಗೆ ತಿಳಿಯದೆಯೂ ನಮ್ಮ ಮನೆಗಳಲ್ಲಿ ಆಯುರ್ವೇದ ಬಳಕೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಲೇಬಲ್ ಮೂಲಕ ದೊರೆಯುತ್ತಿದೆ ಎಂದರು.ಈ ಸಂದರ್ಭ ಡಾ.ಮಮತಾ ಕೆ.ಪಿ. ಅವರನ್ನು ಆಸ್ಪತ್ರೆಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಇದರ ಅಧ್ಯಕ್ಷ ಡಾ.ಕೃಷ್ಣ ಗೋಖಲೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ, ವೈದ್ಯಾಧಿಕಾರಿ ಡಾ. ಝಾಹೀದ್ ಇದ್ದರು.
ಜಿಲ್ಲಾ ಆಯುಷ್ ಅಧಿಕಾರಿ ಇಕ್ಬಾಲ್ ಸ್ವಾಗತಿಸಿದರು. ಡಾ. ಶೋಭಾರಾಣಿ ನಿರೂಪಿಸಿದರು.---------------