ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ (ರ-ಬ)
ಫೆ.೨೨, 23ರಂದು ನಡೆಯುವ ರನ್ನ ಉತ್ಸವ ಯಶಸ್ಸಿಗೆ ರನ್ನಬೆಳಗಲಿ ಪಟ್ಟಣದ ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ ಮಾಡಿದರು.ರನ್ನಬೆಳಗಲಿ ಪಟ್ಟಣದ ಬಂದಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಬೆಳಗಲಿಯಲ್ಲಿ ಫೆ.೨೨, ಮುಧೋಳದಲ್ಲಿ ೨೩,೨೪ರಂದು ರನ್ನ ಉತ್ಸವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಉತ್ಸವದ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಉತ್ಸವ ಯಶಸ್ಸಿಗೆ ಪಟ್ಟಣದ ಸಾರ್ವಜನಿಕರು ಮತ್ತು ಸ್ಥಳೀಯ ಪಪಂ ಸಹಕಾರ ಬಹಳ ಮುಖ್ಯ. ಉತ್ಸವ ಯಶಸ್ಸಿಗೆ ಕೈಗೊಳ್ಳಬೇಕಾದ ಸಲಹೆ ಸೂಚನೆ ನೀಡಿದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಉತ್ಸವದ ಯಶಸ್ಸಿಗೆ ಶ್ರಮಿಸುತ್ತೇವೆ. ಈಗಾಗಲೇ ರನ್ನ ವೈಭವದ ಶೇ.೫೦ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.ರಥಯಾತ್ರೆಗೆ ಚಾಲನೆ :ಫೆ.೧೧ರಂದು ಮಹಾಕವಿಯ ರನ್ನನ ಜನ್ಮ ಸ್ಥಳವಾದ ರನ್ನಬೆಳಗಲಿಯಿಂದ ರನ್ನ ರಥಯಾತ್ರೆಗೆ ಚಾಲನೆ ನೀಡಲಾಗುವುದು. ರಥಯಾತ್ರೆಯು ಮುಧೋಳ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಫೆ.೨೧ರಂದು ಸಂಜೆ ಮರಳಿ ರನ್ನಬೆಳಗಲಿ ಪಟ್ಟಣಕ್ಕೆ ಬರಲಿದೆ ಎಂದು ಹೇಳಿದರು.
ರನ್ನ ಪ್ರತಿಷ್ಠಾನ ಸದಸ್ಯ ಸಿದ್ಧರಾಮ ಶಿವಯೋಗಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಮುಧೋಳ ಮತ್ತು ರನ್ನಬೆಳಗಲಿ ರನ್ನ ವೈಭವ ಜರುಗುತ್ತಿದ್ದು, ಯಾವುದೇ ಬೇಧಭಾವ ಇಲ್ಲದೆ ಎಲ್ಲಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ರನ್ನ ಬೆಳಗಲಿಯಲ್ಲಿ ಜರಗುವಂತಾಗಬೇಕು ಎಂದು ಹೇಳಿದರು.ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕೆಂದು ನಮ್ಮೂರ ಜಾತ್ರೆಯಂತೆ ಕುಂದುಕೊರತೆಗಳಿಲ್ಲದಂತೆ ನಾವೆಲ್ಲ ಭೇದ ಭಾವ ಮರೆತು ಒಗ್ಗಟ್ಟಾಗಿ ರನ್ನ ವೈಭವ ಹಬ್ಬವನ್ನು ಯಶಸ್ವಿಗೊಳಿಸೋಣ. ಈ ಬಾರಿ ರಾಜ್ಯ, ಜಿಲ್ಲಾ, ತಾಲೂಕ ಮಟ್ಟದಲ್ಲಿ ಮೂರು ರನ್ನ ರಥಗಳು ರನ್ನ ರಥ ಯಾತ್ರೆಗೆ ಸಿದ್ದುಗೊಳ್ಳುತ್ತಿವೆ ಎಂದು ತಿಳಿಸಿದರು.
ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ಉತ್ಸವದ ಉದ್ಘಾಟನೆ ರನ್ನಬೆಳಗಲಿಯಲ್ಲಿ ಜರುಗುವುದರಿಂದ ಮಹಾಲಿಂಗಪುರ ಮತ್ತು ಮುಧೋಳ ರಸ್ತೆ ಭಾಗದಲ್ಲಿ ಪ್ರತ್ಯೇಕ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಧೋಳ ತಹಸೀಲ್ದಾರ್ ಮಹಾದೇವ ಸನಮೂರಿ, ಮುಧೋಳ ಸಿಪಿಐ ಎಂ.ಎನ್. ಶಿರಹಟ್ಟಿ, ಪಿಎಸೈ ಅಜೀತ ಪಾಟೀಲ, ರಬಕವಿ-ಬನಹಟ್ಟಿ ತಹಸೀಲ್ದಾರ ಗಿರೀಶ ಸ್ವಾದಿ, ಸದಾಶಿವ ಗುರೂಜಿ, ಪಟ್ಟಣದ ಹಿರಿಯರಾದ ಚಿಕ್ಕಪ್ಪ ನಾಯಕ, ಮಹಾಲಿಂಗಪ್ಪ ಕೊಣ್ಣೂರ, ಸದಾಶಿವ ಸಂಕ್ರಟ್ಟಿ, ರಾಚಯ್ಯ ಸಾಲಿಮಠ, ಮೋನಪ್ಪ ಲೋಹಾರ, ಶಿವಪ್ಪ ಮಂಟೂರ, ಮಹಾದೇವಪ್ಪ ಮುರನಾಳ, ಶಿವನಗೌಡ ಪಾಟೀಲ, ಪಂಡಿತ ಪೂಜಾರಿ, ಸಿದ್ದುಗೌಡ ಪಾಟೀಲ, ಪ್ರವೀಣ ಪಾಟೀಲ, ಸದಾಶಿವ ಸಂಕ್ರಟ್ಟಿ, ಸಂಗಪ್ಪ ಅಮಾತಿ, ಯಮನಪ್ಪ ದೊಡಮನಿ, ಮುತ್ತಪ್ಪ ನಾಯಕ, ಚನ್ನಪ್ಪ ಜಾಲೀಕಟ್ಟಿ, ಲಕ್ಕಪ್ಪ ಹಂಚಿನಾಳ, ಈರಪ್ಪ ಕಿತ್ತೂರ, ಮಹಾದೇವ ಹಾದಿಮನಿ, ಕೆ ಎ ಧಡೂತಿ, ಸಿದ್ದು ಸಾಂಗ್ಲಿಕರ, ರವಿಕುಮಾರ ಮೇತ್ರಿ, ಭೀಮರಾವ ಕಾಳವ್ವಗೋಳ, ಪಂಡಿತ ಪೂಜೇರಿ, ರಾಘವೇಂದ್ರ ನೀಲನ್ನವರ ಸೇರಿದಂತೆ ಪ.ಪಂ ಸದಸ್ಯರು, ಮುಧೋಳ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.