ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಸುಸೂತ್ರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಆಡಳಿತ ಸುಲಲಿತವಾಗಿ ಸಾಗುತ್ತದೆ. ಸರ್ಕಾರಿ ನೌಕರರು ಕಾರ್ಯಾಂಗದ ಆಧಾರಸ್ತಂಭಗಳಾಗಿದ್ದು, ಆಡಳಿತವು ವ್ಯವಸ್ಥಿತವಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಬಳ್ಳಾರಿ ಹೇಳಿದರು.ತಾಲೂಕು ನೌಕರರ ಸಂಘ ಶನಿವಾರ ಸ್ಥಳೀಯ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಾಸಕಾಂಗ ಜಾರಿಗೆ ತರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರು ಮಹತ್ವದ ಪಾತ್ರ ವಹಿಸುತ್ತಾರೆ. ನೌಕರರು ಇಂದು ಹಲವು ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘವು ಅವರಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳು ತಾಲ್ಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಪ್ರೀತಿಗೆ ಪಾತ್ರರಾಗಿ ಎಂದು ಶುಭ ಕೋರಿದರು.ಉಪನ್ಯಾಸಕ ಯಶವಂತ ಕೊಕ್ಕನವರ ಮಾತನಾಡಿ, ‘ನೌಕರರು ಸರ್ಕಾರದ ಆಡಳಿತದ ಪ್ರಮುಖ ಭಾಗವಾಗಿದ್ದು, ಎಲ್ಲ ನೌಕರರು ಮುತುವರ್ಜಿಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಆಡಳಿತ ಸುಲಲಿತವಾಗಿ ನಡೆಯುತ್ತಿದೆ. ಸರ್ಕಾರಿ ನೌಕರರು ಮಾಡುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಹರ್ಷ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ವಾಯ್ ಅಂಬಿಗೆರ ಮಾತನಾಡಿ, ಎರಡನೆಯ ಬಾರಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ತಮ್ಮೆಲ್ಲರ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಎಲ್ಲ ನೌಕರರ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ಶ್ರಮಿಸುವೆ ಎಂದು ತಿಳಿಸಿದರು.ನೌಕರರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ, ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ನೋಂದಣಾಧಿಕಾರಿ ಎಸ್ ಬಿ ಮುಂಡರಗಿ, ಸಿದ್ದು ನಕ್ಕರಗುಂದಿ, ಪ್ರಾಚಾರ್ಯ ಸುನಿಲ ನಾರಾಯಣಿ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಠ್ಠಲ ವಾಲಿಕಾರ, ಜಿಲ್ಲಾ ಖಜಂಚಿ ಗೋಪಾಲ ನಿಲನಾಯಕ, ರಾಜ್ಯ ಪರಿಷತ್ ಸದಸ್ಯ ಅಪ್ಪಾಸಾಹೇಬ ಮೋದಿ, ತಾಲ್ಲೂಕಾ ನೌಕರ ಸಂಘದ ಖಜಾಂಚಿ ದಾನಪ್ಪ ತಳವಾರ, ಕಾರ್ಯದರ್ಶಿ ಮಹೇಶ ಜಗಲಿ,ಎಚ್.ಕೆ.ಲಿಂಗಣ್ಣವರ ಇದ್ದರು.