ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜೂ.೧ ರಂದು ಶಾಲಾರಂಭ: ಟಿಪ್ಪರ್‌ ಹಾವಳಿಗೆ ಸಿಗುವುದೇ ಮುಕ್ತಿ? ಎಂದು ಕನ್ನಡಪ್ರಭ ಪತ್ರಿಕೆಯು ಜೂ.೧ರಂದು ಪ್ರಕಟಿಸಿದ್ದ ವರದಿ ಗಮನಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಜೂ.೧ ರಂದೇ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪರಿಮಿತಿ ೨೦೦ ಮೀಟರೊಳಗೆ ವಿದ್ಯಾರ್ಥಿಗಳು ಶಾಲೆಗೆ ಬರುವ ಬೆಳಗ್ಗೆ ೮ ರಿಂದ ೧೦.೩೦ ಗಂಟೆ ಹಾಗೂ ಶಾಲೆ ಬಿಡುವ ಮಧ್ಯಾಹ್ನ ೩.೩೦ ರಿಂದ ೫.೩೦ರವರೆಗೆ ಭಾರೀ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ತಾಲೂಕಿನ ಬೇಗೂರು ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ ಪೆಕ್ಟರ್‌ ಮೋಹಿತ್‌ ಸಹದೇವ್‌ ಮಾತ್ರ ಮಂಗಳವಾರ ಬೆಳಗ್ಗೆ ೮ ಗಂಟೆಗೆ ಶಾಲಾ ವ್ಯಾಪ್ತಿಯ ಬಳಿ ಪೊಲೀಸ್‌ ಪೇದೆಗಳನ್ನು ನಿಯೋಜಿಸಿ, ಹೆದ್ದಾರಿಯಲ್ಲಿ ಬಂದ ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿ, ಜಿಲ್ಲಾಧಿಕಾರಿ ಆದೇಶದಂತೆ ಬೆಳಗ್ಗೆ ೧೦.೩೦ ರ ಬಳಿಕ ಟಿಪ್ಪರ್‌ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಆದರೆ, ಗುಂಡ್ಲುಪೇಟೆ ಪೊಲೀಸರು ಮಾತ್ರ ಜಿಲ್ಲಾಧಿಕಾರಿಗಳು ಹೇರಿರುವ ತಾತ್ಕಾಲಿಕ ನಿರ್ಬಂಧ ಪಾಲನೆಗೆ ಮುಂದಾಗಿಲ್ಲ. ಡೀಸಿ ಕ್ರಮಕ್ಕೆ ಪ್ರಶಂಸೆ:

ಜಿಲ್ಲಾಧಿಕಾರಿ ಶ್ರೀರೂಪ ಅವರು ಭಾರೀ ವಾಹನಗಳಿಗೆ ಸಂಚಾರ ನಿರ್ಬಂಧಿಸಿರುವ ಕ್ರಮ ಸರಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಸ್ಥಳೀಯ ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಪೊಲೀಸರು ಬೆಲೆ ನೀಡಿ ಶಾಲಾ ಆರಂಭ ಮತ್ತು ಬಿಡುವ ಸಮಯದಲ್ಲಿ ಟಿಪ್ಪರ್ ಗಳಿಗೆ ಬ್ರೇಕ್‌ ಹಾಕಲಿ ಎಂದಿದ್ದಾರೆ.

ಟಿಪ್ಪರ್‌ ಗಳು ಸಂಚರಿಸುವ ಬಗ್ಗೆ ಸ್ಥಳೀಯ ಗುಂಡ್ಲುಪೇಟೆ ಪೊಲೀಸರು ಮಾತ್ರ ಮಂಗಳವಾರ ವಾಚ್‌ ಮಾಡಿದ್ದಾರೆ. ಅಲ್ಲದೆ ಟಿಪ್ಪರ್‌ ಮಾಲೀಕರಿಗೂ ಶಾಲಾ ಆರಂಭ ಮತ್ತು ಬಿಡುವ ಸಮಯದಲ್ಲಿ ಟಿಪ್ಪರ್‌ ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಟಿಪ್ಪರ್ ಗಳು ನಿಯಮ ಉಲ್ಲಂಘಿಸಿದರೆ ಬುಧವಾರದಿಂದ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದವರ ಮೇಲೆ ಎಫ್‌ಐಆರ್‌ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.