ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ಇಲಾಖೆ ವಿಶೇಷವಾಗಿ ಒತ್ತು ನೀಡುತ್ತಿರುವುದರಿಂದ ಪೋಷಕರು ಖಾಸಗಿ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಶಿಕ್ಷಣ ಸಂಯೋಜಕ ನವೀನ್‌ಕುಮಾರ್ ಮನವಿ ಮಾಡಿದರು.ಕೆಪಿಎಸ್ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಉತ್ತಮ ಕಲಿಕೆ-ಉಜ್ವಲ ಭವಿಷ್ಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ವರ್ಷದ ಶಿಕ್ಷಣ ಇಲಾಖೆ ಘೋಷ ವಾಕ್ಯ ಇದಾಗಿದ್ದು ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರು ಸದಾಬದ್ಧರು. ಸರ್ಕಾರಿ ಶಾಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಲಭಿಸಿದೆ ಎಂದರು.
ತಾಲೂಕಿನಲ್ಲಿ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆ ಇದಾಗಿದೆ. ಶೇ.ನೂರರಷ್ಟು ಫಲಿತಾಂಶ ಎಸ್ಸೆಸ್ಸೆಲ್ಸಿಯಲ್ಲಿ ಲಭಿಸಲು ಗುಣಾತ್ಮಕ ಶಿಕ್ಷಣ ಕಾರಣ. ಬಿಇಒ, ಡೀಸಿ, ಜಿಪಂ ಸಿಇಒ ಹಾಗೂ ಡಿಡಿಪಿಐ ಲೋಕೇಶ್ ಮಾರ್ಗದರ್ಶನದಲ್ಲಿ ನಿರಂತರ ಶಾಲೆಗಳಿಗೆ ಭೇಟಿ, ಪೋಷಕರ ಸಂಪರ್ಕ ಇಟ್ಟುಕೊಂಡು ವಿಶೇಷ ತರಗತಿ ನಡೆಸುವಂತೆ ಶಿಕ್ಷಕರಿಗೆ ತಿಳಿಸಿದ್ದರು ಎಂದರು.ಮನೆ ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರು. ಪರಿಣಾಮ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ರಾಜ್ಯದಲ್ಲಿ 5 ನೇ ಸ್ಥಾನ ಹಾಗೂ ತಾಲೂಕು ಹಂತದಲ್ಲಿ 2 ನೇ ಸ್ಥಾನ ಪಡೆದಿದೆ. ಇದರಲ್ಲಿ ಅತೀ ಹೆಚ್ಚು ಸರ್ಕಾರಿ ಶಾಲೆ ಮಕ್ಕಳು ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಪೋಷಕರು ಸರ್ಕಾರಿ ಶಾಲೆಗೆ ಅಂಜಿಕೆ ಬಿಟ್ಟು ಸೇರಿಸಲು ಮುಂದಾಗಿ ಎಂದು ಕರೆ ನೀಡಿದರು.
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಈ ಬಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಕಲಿಕೆ- ಉಜ್ವಲ ಭವಿಷ್ಯದ ಘೋಷವಾಕ್ಯವನ್ನು ಪಾಲಿಸಿ ಶಾಲೆ, ಪೋಷಕರಿಗೆ ಕೀರ್ತಿತರುವ ಕೆಲಸ ಮಾಡಬೇಕು ಎಂದು ಹಿತನುಡಿದರು.
ಶಿಕ್ಷಣ ಸಂಯೋಜಕ ಜೆ.ಎಸ್. ಸುರೇಶ್ ನಿರಂತರ ಕಲಿಕೆಯ ಮಾಹಿತಿ ನೀಡಿದರು. ಗಿರೀಶ್, ಮಹಮದ್ ರಿಜ್ವಿ ಮತ್ತಿತರರಿದ್ದರು.