ಗಂಗಾವತಿ: ಪಿಯುಸಿ ಹಂತ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಅತ್ಯಂತ ಪ್ರಮುಖ ತಿರುವಾಗಿದೆ. ಈ ಅಮೂಲ್ಯ ಅವಧಿಯಲ್ಲಿ ಯುವ ಪೀಳಿಗೆ ಮೊಬೈಲ್ ಹಾಗೂ ಇತರೆ ಗಮನ ಕೆಡಿಸುವ ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ದೂರವಿದ್ದು, ತಮ್ಮ ಸಂಪೂರ್ಣ ಗಮನ ಜ್ಞಾನಾರ್ಜನೆಯ ಕಡೆಗೆ ಹರಿಸಬೇಕು ಎಂದು ಗಂಗಾವತಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಜಿ.ಎಸ್.ನ್ಯಾಮಗೌಡರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಲ್ಲಿನ ವಡ್ಡರಹಟ್ಟಿ ಕೊಪ್ಪಳ ರಸ್ತೆಯಲ್ಲಿರುವ ಎಸ್‌‌.ಕೆ.ಆರ್.ಸಮೂಹ ಸಂಸ್ಥೆಯ ಕೆಂಧೋಳೆ ರಾಮಣ್ಣ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ವಿಶೇಷ ಸ್ವರೂಪದ ವಿಧಾನ ಬಗ್ಗೆ ವಿವರಿಸಿದರು. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನ ಎನ್ನುವುದು ಕೇವಲ ಪರೀಕ್ಷೆಗಾಗಿ ಅಥವಾ ಅಂಕಗಳಿಕೆಗಾಗಿ ಆಗಿರಬಾರದು. ವಿಷಯದ ಆಳ-ಅಗಲ ಅರ್ಥ ಮಾಡಿಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದಿನನಿತ್ಯದ ಪಾಠ ಓದುವ ನಿಯಮಿತ ಅಧ್ಯಯನ ಶಿಸ್ತು ನಿಮ್ಮದಾಗಬೇಕು. ಕಠಿಣ ವಿಷಯ ಸುಲಭವಾಗಿ ಗ್ರಹಿಸಲು ಸ್ವಂತ ಟಿಪ್ಪಣಿ ಸಿದ್ಧಪಡಿಸಿಕೊಳ್ಳಿ. ಯುವ ಪೀಳಿಗೆಯು ಶಿಕ್ಷಣದ ಜತೆಗೆ ಶಿಸ್ತು, ಏಕಾಗ್ರತೆ ಹಾಗೂ ದೇಶದ ಕಾನೂನು ಗೌರವಿಸುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಾಧನೆಯ ಶಿಖರಕ್ಕೇರಲು ಸಾಧ್ಯ ಎಂದು ವಿಸ್ತೃತವಾಗಿ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯ ಪ್ರಜ್ಞೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಹೆತ್ತವರ ತ್ಯಾಗ ಹಾಗೂ ಗುರುಗಳ ಮಾರ್ಗದರ್ಶನ ಸದಾ ಗೌರವಿಸಬೇಕು. ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಸಮಾಜಕ್ಕೆ ಉಪಯುಕ್ತವಾಗುವ ಸುಸಂಸ್ಕೃತ ನಾಗರಿಕರಾಗಿ ಬೆಳೆಯಬೇಕು ಎಂದು ಹಿತನುಡಿಗಳನ್ನಾಡಿದರು.

ಕಾಲೇಜಿನ ಪ್ರಾಚಾರ್ಯ ಶಿವಾನಂದ ಮೇಟಿ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ಹಿನ್ನೆಲೆ ಹಾಗೂ ಈ ಭಾಗದ ಶೈಕ್ಷಣಿಕ ಪ್ರಗತಿ ಕೊಂಡಾಡಿದರು. ಸುಮಾರು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ತೀವ್ರ ಹಿಂದುಳಿದು, ಶೈಕ್ಷಣಿಕ ಬರಡುತನ ಎದುರಿಸುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಈ ಭಾಗದಲ್ಲಿ ಶೈಕ್ಷಣಿಕ ನಂದನವನ ನಿರ್ಮಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ವಿಶೇಷವಾಗಿ ಗಂಗಾವತಿಯ ಶೈಕ್ಷಣಿಕ ಕ್ಷೇತ್ರದಲ್ಲಿ ಇಂದು ಶೈಕ್ಷಣಿಕ ನಂದನವನವೇ ನಿರ್ಮಾಣವಾಗಿದೆ ಎಂದು ಅತ್ಯಂತ ಸ್ಪಷ್ಟ ನುಡಿಗಳಲ್ಲಿ ಪ್ರತಿಪಾದಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌‌.ಕೆ.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀನಿವಾಸ್ ರಾವ್ ಕಲ್ಯಾಣಿ ಮಾತನಾಡಿ, ನಮ್ಮ ಸಂಸ್ಥೆಯು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಒತ್ತು ನೀಡುತ್ತಿದೆ. ಗಂಗಾವತಿಯನ್ನು ಶೈಕ್ಷಣಿಕವಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ತರಗತಿಗೆ ಪ್ರವೇಶ ಪಡೆದ ನೂತನ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಲೇಜು ಆವರಣಕ್ಕೆ ಬರಮಾಡಿಕೊಂಡರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಹ್ವೇಶ್ವರ ಟ್ರಸ್ಟ್‌ನ ಕಾರ್ಯದರ್ಶಿ ರಾಮ್ ಮೋಹನ್ ಎಂ.,ಎಸ್‌‌.ಕೆ.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಯಶ್ವಿಂತ್ ಕೆಂಧೋಳೆ, ಮುಖ್ಯೋಪಾಧ್ಯಾಯ ಮದ್ದಾನೆಪ್ಪ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.