ಸಾರಾಂಶ
ಶ್ರೀಗಳನ್ನು ದೇವಸ್ಥಾನದ ವತಿಯಿಂದ ಆಡಳಿತ ಧರ್ಮದರ್ಶಿ ಸತೀಶ ಶೆಟ್ಟಿ ಅವರು ಹೂಹಾರ ಹಾಕಿ ಬರಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಭಟ್ಕಳ
ಮಂತ್ರಾಲಯದ ಗುರು ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಮುರ್ಡೇಶ್ವರಕ್ಕೆ ಭೇಟಿ ನೀಡಿ ಮುರುಡೇಶ್ವರ ದೇವರಿಗೆ ಮಂಗಳಾರತಿ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.ಶ್ರೀಗಳನ್ನು ದೇವಸ್ಥಾನದ ವತಿಯಿಂದ ಆಡಳಿತ ಧರ್ಮದರ್ಶಿ ಸತೀಶ ಶೆಟ್ಟಿ ಅವರು ಹೂಹಾರ ಹಾಕಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿ, ಶಿವರಾಮ ಅಡಿ, ಅರ್ಚಕ ವೃಂದದವರು, ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಊರಿನ ಪ್ರಮುಖರು ಮುಂತಾದವರು ಉಪಸ್ಥಿತರಿದ್ದರು.
ನಂತರ ಶ್ರೀಗಳು ದೇವಸ್ಥಾನದಲ್ಲಿನ ಶಿಸ್ತು, ದೇವಾಲಯದಲ್ಲಿನ ಸ್ವಚ್ಛತೆ ಮತ್ತು ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಶ್ರೀಗಳು ದೇವಾಲಯದ ಎದುರುಗಡೆ ಇರುವ ಸಮುದ್ರ ತೀರದಲ್ಲಿ ಕೆಲಕಾಲ ವಿಹರಿಸುತ್ತಾ ಇತ್ತೀಚೆಗೆ ನಿರ್ಮಾಣ ಮಾಡಲಾದ ತೇಲುವ ಸೇತುವೆಯಲ್ಲಿ ನಡೆದಾಡಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ನೇತ್ರಾಣಿ ಅಡ್ವೆಂಚರ್‌ನ ಮಾಲೀಕ ಗಣೇಶ ಹರಿಕಂತ್ರ, ಮುಖಂಡ ಕೃಷ್ಣಾ ನಾಯ್ಕ ಮುಂತಾದವರಿದ್ದರು. ಧೇನು ಗೋಶಾಲೆಗೆ ಮಂತ್ರಾಲಯ ಶ್ರೀ ಭೇಟಿಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಮುರುಡೇಶ್ವರದ ಧೇನು ಗೋಶಾಲೆಗೆ ಭೇಟಿ ನೀಡಿದೇಶೀ ಗೋವುಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋವುಗಳಿಗೆ ಗೋಗ್ರಾಸ ನೀಡಿ ಸಂತಸಪಟ್ಟ ಶ್ರೀಗಳು, ಕೆಲಹೊತ್ತು ಧೇನು ಗೋಶಾಲೆಯಲ್ಲಿನ ಗೋವುಗಳನ್ನು ಕಂಡು ಅವುಗಳ ನಿರ್ವಹಣೆಯ ಕುರಿತು ತಿಳಿದುಕೊಂಡರು. ಗೋವುಗಳ ನಿರ್ವಹಣೆಗೆ ಶ್ರೀಗಳು ₹50 ಸಾವಿರ ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಗೋಶಾಲೆಯ ಮಾಲೀಕ ಯೋಗೀಶ ಭಟ್ಟ, ರೇಷ್ಮಾ ಭಟ್ಟ, ಪ್ರಕಾಶ ಭಟ್ಟ ಮುಂತಾದವರಿದ್ದರು.