ಪುರಂದರದಾಸರಿಂದ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ: ಡಾ. ನಿರ್ಮಲಾನಂದ ಮಹಾಸ್ವಾಮೀಜಿ

| Published : Nov 05 2025, 01:30 AM IST

ಪುರಂದರದಾಸರಿಂದ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ: ಡಾ. ನಿರ್ಮಲಾನಂದ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದ ದಾಸಶ್ರೇಷ್ಠ ಪುರಂದರ ದಾಸರ ಕೀರ್ತನೆಗಳಲ್ಲಿ ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಚಿಂತನೆಯೂ ಒಳಗೊಂಡಿದೆ. ಜೀವನದಲ್ಲಿ ಸತ್ಯವನ್ನು ಕಂಡುಕೊಂಡ ಅವರು ಉತ್ತಮ ಸಂದೇಶಗಳನ್ನು ಕೀರ್ತನೆಗಳ ಮೂಲಕ ನೀಡಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದ ದಾಸಶ್ರೇಷ್ಠ ಪುರಂದರ ದಾಸರ ಕೀರ್ತನೆಗಳಲ್ಲಿ ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಚಿಂತನೆಯೂ ಒಳಗೊಂಡಿದೆ. ಜೀವನದಲ್ಲಿ ಸತ್ಯವನ್ನು ಕಂಡುಕೊಂಡ ಅವರು ಉತ್ತಮ ಸಂದೇಶಗಳನ್ನು ಕೀರ್ತನೆಗಳ ಮೂಲಕ ನೀಡಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಸ್ಥಾಪನೆಯ 35ನೇ ವರ್ಷದ ಆಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುರಂದರ ದಾಸರ ಕೀರ್ತನೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಆಶೀರ್ವಚನ ನೀಡಿ, ತಜ್ಞರ ಸಂಶೋಧನೆಯ ವರದಿಯನ್ನು ಆಧರಿಸಿ ಕರ್ನಾಟಕ ಸರ್ಕಾರ ಪುರಂದರದಾಸರು ಇದೇ ಪ್ರದೇಶದಲ್ಲಿ ಜನಿಸಿದವರು ಎಂದು ಈಗಾಗಲೇ ಘೋಷಿಸಿದೆ. ಭಕ್ತಿಪಂತದ ದಾಸ ಶ್ರೇಷ್ಠರಲ್ಲಿ ಒಬ್ಬರಾಗಿರುವ ಪುರಂದರದಾಸರಿಗೆ ಜನ್ಮ ನೀಡಿದ ಆರಗ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ಪ್ರಾಧಿಕಾರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದೂ ಹೇಳಿದರು.

ತ್ಯಾಗದ ಜೀವನದ ಮೂಲಕ ನಾದೋಪಾಸನೆ ನಂಬಿ ಜಗತ್ತಿಗೆ ಮುಕ್ತಿ ಮಾರ್ಗ ತೋರಿದವರು ಪುರಂದರದಾಸರು. ಸಮಕಾಲೀನ ಸಮಾಜ ಇದನ್ನು ನೆನಪಿಸಿಕೊಳ್ಳುವ ಮೂಲಕ ಜೀವನವನ್ನು ಸುಂದರಗೊಳಿಸಿಕೊಳ್ಳಬಹುದಾಗಿದೆ. ಸರಳವಾದ ಬದುಕಿಗೆ ಶಕ್ತಿ ಇದೆ ಎಂಬುದನ್ನು ಅರಿಯಬೇಕಿದೆ ಎಂದರು.

ಬೆಕ್ಕಿನಕಲ್ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಾರ್ಷಿಕೋತ್ಸವದಲ್ಲಿ ದಾಸಶ್ರೇಷ್ಠರಾದ ಪುರಂದರದಾಸರ ಸ್ಮರಣೆ ಅತ್ಯಂತ ಅರ್ಥಪೂರ್ಣವಾಗಿದೆ. ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಎರಡಕ್ಕೂ ಸಾಮ್ಯತೆ ಇದೆ. ದಾರ್ಶನಿಕರ ವಿಚಾರಧಾರೆಗಳ ದಾರಿ ಭಿನ್ನವಾಗಿದ್ದರೂ ಗುರಿ ಒಂದೇ ಆಗಿದ್ದು, ಗುರಿ ಮುಟ್ಟುವುದು ಮಾತ್ರ ಮುಖ್ಯವಾಗಿದೆ. ಇತಿಹಾಸದಲ್ಲಿ ಹುದುಗಿ ಹೋಗುತ್ತಿರುವ ಮಹಾನ್ ವ್ಯಕ್ತಿಗಳನ್ನು ಮರೆಯುತ್ತಿದ್ದು ಈ ನಿಟ್ಟಿನಲ್ಲಿ ಆತ್ಮ ನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಪಂಪನಿಂದ ಮೊದಲ್ಗೊಂಡು ಕುವೆಂಪುವರೆಗಿನ ಸಾಹಿತ್ಯದ ಜನಪರ ಮಾರ್ಗವನ್ನು ಬಿಟ್ಟು ಇಂದಿನ ದುರಂತಗಳಿಗೆ ಸಿಕ್ಕು ನರಳುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಆರಗ ಐತಿಹಾಸಿಕವಾಗಿ ಮೆರೆದಿರುವುದಕ್ಕೆ ಸಾಕಷ್ಟು ಪುರಾವೆಗಳೂ ಇದ್ದು, ಪುರಂದರದಾಸರ ಜನ್ಮಸ್ಥಳದ ಬಗ್ಗೆ ಮೊದಲಿಗೆ ಪ್ರಸ್ಥಾಪ ಮಾಡಿದವರು ಮಾಜಿ ಶಾಸಕ ದಿ.ಪಟಮಕ್ಕಿ ರತ್ನಾಕರ್. ಹಂಪಿ ವಿಶ್ವವಿದ್ಯಾಲಯದ ಕಡೆಯಿಂದ ಮಾಡಲಾಗಿರುವ ಸಂಶೋಧನೆಯ ಆಧಾರದಲ್ಲಿ ಸರ್ಕಾರವೂ ಇದನ್ನು ಸಂಶೋದನಾ ವರದಿಯನ್ನು ಧೃಡಪಡಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಪುಷ್ಠಿ ದೊರೆತಿದೆ. ಆರಗದ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದ್ದು, ನೇರವಾಗಿ ಪ್ರದಾನಿಯವರನ್ನು ಸಂಪರ್ಕಿಸಲು ಶಕ್ತರಾಗಿರುವ ಶ್ರೀಗಳು ಆರಗಕ್ಕೆ ಬಂದಿರುವುದು ಈ ಕಾರ್ಯಕ್ಕೆ ನಿರೀಕ್ಷಿತ ಯಶಸ್ಸು ದೊರೆಯುವುದು ಖಚಿತ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಧರ್ಮಗುರುಗಳು ಜಾತಿಧರ್ಮಗಳ ಗೋಡೆಯನ್ನು ಬೀಳಿಸಿ ಮಾನವೀಯತೆಯ ಆಧಾರದಲ್ಲಿ ಸರ್ವರನ್ನೂ ಒಂದುಗೂಡಿಸುವ ಅನಿವಾರ್ಯತೆಯ ಸನ್ನಿವೇಶ ಈ ದೇಶದಲ್ಲಿದೆ. ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ದೂರ ಮಾಡಿ ಮನುಷ್ಯನ ಬದುಕಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಪುರಂದರದಾಸರು ಜನ್ಮ ತಾಳಿದ ಈ ನೆಲದ ಮಹತ್ವವನ್ನು ಸ್ಥೀರೀಕರಿಸುವ ನಿಟ್ಟಿನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗಳು ಸರ್ಕಾರದ ಗಮನ ಸೆಳೆಯಬೇಕಿದೆ ಎಂದರು. ಶಾಸಕ ಚನ್ನಬಸಪ್ಪ ಮಾತನಾಡಿ, ದಾಸರ ಕೀರ್ತನೋತ್ಸವ ಪರಿಕಲ್ಪನೆಯೇ ಈ ಕಾರ್ಯಕ್ರಮಕ್ಕೆ ಶೋಭೆ ತರುವಂತಿದ್ದು ಹಿಂದೂ ಸಮಾಜಕ್ಕೆ ಶಕ್ತಿ ಕೊಡುವಂತಿದೆ. ರಾಜಕೀಯ ಕ್ಷೇತ್ರಕ್ಕೆ ಶಾಂತವೇರಿಯಂತವರನ್ನು ಕೊಟ್ಟಿರುವ ಆರಗದ ಈ ನೆಲ ವಿಶೇಷ ಮಹತ್ವವನ್ನು ಹೊಂದಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು.

ವೇದಿಕೆಯಲ್ಲಿ ರೇಣುಕಾನಂದ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮಿ, ಶಂಕರಾರೂಡ ಸ್ವಾಮಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಆರಗ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೆಶಕ ಸಿರಿಬೈಲು ಧರ್ಮೆಶ್, ತಾಲೂಕು ಅಧ್ಯಕ್ಷ ಕೂಳೂರು ಕೃಷ್ಣಮೂರ್ತಿ, ಆದಿಚುಂಚನಗಿರಿ ಪಿಯು ಕಾಲೇಜಿನ ಪ್ರಾಂಶುಪಾಲ ಗುರುರಾಜ್ ಮುಂತಾದವರು ಇದ್ದರು.

ಈ ಕಾರ್ಯಕ್ರಮದ ಅಂಗವಾಗಿ ವಿಧ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ ಮತ್ತು ಗೀತಗಾಯನ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದಲೂ ಬಂದಿದ್ದ ಜನರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ---

ತೀರ್ಥಹಳ್ಳಿ ತಾಲೂಕು ಆರಗದಲ್ಲಿ ನಡೆದ ಪುರಂದರ ದಾಸರ ಕೀರ್ತನೋತ್ಸವ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಉದ್ಘಾಟಿಸಿದರು.