ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭೂಮಿ ಹೊಂದಿರುವವರು ತುಂಡು ಭೂಮಿಯನ್ನೂ ಮಾರಾಟ ಮಾಡದೆ ಉಳಿಸಿಕೊಳ್ಳಬೇಕು. ಭೂಮಿಯನ್ನು ಉಳಿಸಿಕೊಂಡು ನೀವೇ ಆಹಾರ ಬೆಳೆದು ತಿನ್ನುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ನೈಸರ್ಗಿಕ ಕೃಷಿಕ ಪಾಸಿಟಿವ್ ತಮ್ಮಯ್ಯ ತಿಳಿಸಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಶ್ರೀಹರ್ಷ ಸಮಾಜ ಸೇವಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ನನ್ನ ಆಹಾರ-ನನ್ನ ಆರೋಗ್ಯ-ನನ್ನ ಜವಾಬ್ದಾರಿ ಕುರಿತ ಚಿಂತನ-ಮಂಥನ, ಸಂವಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಭೂಮಿಯನ್ನು ವಿಜ್ಞಾನ-ತಂತ್ರಜ್ಞಾನ, ಅಭಿವೃದ್ಧಿ ಹೆಸರಿನಲ್ಲಿ ಐವತ್ತು ವರ್ಷದಲ್ಲೇ ಸರ್ವನಾಶ ಮಾಡಿದ್ದೇವೆ. ಅದನ್ನು ಮತ್ತೆ ಸರಿಪಡಿಸಲಾಗದ ಸ್ಥಿತಿಗೆ ತಂದಿರಿಸಿದ್ದೇವೆ. ಆದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ. ಇಂದಿಗೂ ಭೂಮಿಗೆ ವಿಷವುಣಿಸುವುದನ್ನು ಮುಂದುವರೆಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮ ಭೂಮಿಯಲ್ಲಿ ನಮಗೆ ಬೇಕಾದ ಶುದ್ಧ ಹಾಗೂ ವಿಷಮುಕ್ತವಾದ ಆಹಾರವನ್ನು ಬೆಳೆದುಕೊಂಡು ಆರೋಗ್ಯಕರ ಜೀವನ ನಡೆಸುವುದಕ್ಕೆ ಪ್ರತಿಯೊಬ್ಬರೂ ಪ್ರಾಶಸ್ತ್ಯ ನೀಡಬೇಕು. ದೇಶದ ಹಸಿರುಕ್ರಾಂತಿಯ ನಂತರ ರೈತರು ಹಣ್ಣು-ತರಕಾರಿಗಳು, ಧಾನ್ಯಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಮಿತಿಮೀರಿ ಉಪಯೋಗಿಸುತ್ತಿರುವ ಪರಿಣಾಮ ಎಲ್ಲಾ ಪದಾರ್ಥಗಳೂ ವಿಷಯುಕ್ತ ಪದಾರ್ಥಗಳಾಗಿವೆ. ನಾವು ನಿತ್ಯ ಉಪಯೋಗಿಸುವ ಪೇಸ್ಟ್, ಸೋಪ್, ಲೋಪಸನ್‌ಗಳಲ್ಲಿ ವಿಷಯುಕ್ತ ರಾಸಾಯನಿಕವಿರುವುದನ್ನು ಮನಗಾಣಬೇಕು ಎಂದರು.
ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಮುಖ್ಯವಾಗಿ ಉತ್ತಮ ಮಟ್ಟದಲ್ಲಿ ಲಭ್ಯವಿರಬೇಕು. ಆಗ ಭೂಮಿಯಲ್ಲಿ ಬೆಳೆದ ಫಸಲುಗಳಲ್ಲಿ ನೈಸರ್ಗಿಕವಾದ ಶಕ್ತಿ ಇರುತ್ತದೆ. ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗಿ ಸತ್ವ ಕಳೆದುಕೊಳ್ಳುವುದರಿಂದ ಬೆಳೆಗಳು ನೈಸರ್ಗಿಕ ಶಕ್ತಿಯನ್ನು ಹೊಂದಿರುವುದಿಲ್ಲ. ಕೃಷಿ ವಿಜ್ಞಾನಿಗಳು ಈ ಸತ್ಯಾಂಶವನ್ನು ಸರ್ಕಾರಕ್ಕೆ ಹೇಳಿ ರೈತರಿಗೆ ಮನವರಿಕೆ ಮಾಡಿಕೊಟ್ಟರೆ ರೈತರು ಗೋ ಆಧಾರಿತ ನೈಸರ್ಗಿಕ ಕೃಷಿಯತ್ತ ಮುಖ ಮಾಡುವರು ಎಂದರು.ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ರೋಗಗಳು ವ್ಯಾಪಕವಾಗಿ ಮನುಷ್ಯರಲ್ಲಿ ಹರಡುತ್ತಿವೆ. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೇರಳ ಸರ್ಕಾರವು ಬಹುತೇಕ ಅಪಾಯಕಾರಿ ಕೀಟ ನಾಶಕ ಔಷಧಗಳನ್ನು ನಿಷೇಧಿಸಿರುತ್ತದೆ. ಆದರೆ, ಕೇರಳದಿಂದ ಕರ್ನಾಟಕಕ್ಕೆ ಬಂದು ಶುಂಠಿ ಬೆಳೆಯುತ್ತಿರುವ ನಿಷೇಧಿತ ಔಷಧಗಳನ್ನೇ ಇಲ್ಲಿ ಬಳಸುತ್ತಿದ್ದಾರೆ. ಅಮೆರಿಕಾದಲ್ಲಿ ನಿಷೇಧಿಸಿರುವ ಔಷಧಗಳು ದೇಶದ ಮೂಲೆ ಮೂಲೆಗಳಲ್ಲಿ ಮಾರಾಟವಾಗುತ್ತಿವೆ. ಇದರಿಂದ ಬಹುತೇಕ ಜನರು ರೋಗಿಷ್ಟರಾಗಿಯೇ ಬದುಕುತ್ತಿದ್ದಾರೆ ಎಂದು ವಿಷಾದಿಸಿದರು.
ಭೂಮಿ ಶುದ್ಧವಾಗಿದ್ದಾಗ ಅಲ್ಲಿ ಬೆಳೆಯುವ ಆಹಾರ ಪದಾರ್ಥಗಳೂ ಶುದ್ಧವಾಗಿರುತ್ತದೆ, ವಿಷಮುಕ್ತತೆಯಿಂದ ಕೂಡಿರುತ್ತದೆ. ಅದನ್ನು ಸೇವಿಸಿದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಆರೋಗ್ಯ ಚೆನ್ನಾಗಿದ್ದಾಗ ನಾವು ಮಾಡುವ ಕಾರ್ಯಗಳೂ ಶುದ್ಧವಾಗಿರುತ್ತವೆ. ಆದ್ದರಿಂದ ಮೊದಲಿಗೆ ನಮ್ಮ ಭೂಮಿಯನ್ನು ವಿಷಮುಕ್ತ ಹಾಗೂ ಶುದ್ಧವಾಗಿಟ್ಟುಕೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, ಜೀವನದಲ್ಲಿ ಎಲ್ಲ ರೀತಿಯ ಅಲೆಗಳನ್ನು ತಡೆದುಕೊಳ್ಳಬಹುದು. ಆದರೆ, ಕುಟುಂಬ ಸದಸ್ಯನನ್ನು ಕಳೆದುಕೊಂಡ ನೋವು ತಡೆಯಲಾಗದು. ಅದಕ್ಕೆ ಅತೀವ ಆತ್ಮಸ್ಥೈರ್ಯ ಬೇಕು. ಹೀಗಿರುವಾಗ ತಮ್ಮ ಮಗನ ಅಗಲಿಕೆಯಿಂದ ವಿಚಲಿತರಾದರೂ, ಆ ನೋವಿನಿಂದ ಹೊರಬರಲು ಶಾಲೆಗಳ ದತ್ತು ಪಡೆಯುವುದು, ಪ್ರಶಸ್ತಿ ಪುರಸ್ಕಾರ ನೀಡುವ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ನಿಂತಿರುವುದು ಹೆಮ್ಮೆ ಎನಿಸುತ್ತದೆಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶ್ರೀಹರ್ಷ ಕೃಷಿ ಪ್ರೇರಣಾ ಸಂಸ್ಥೆ ನಾಮಫಲಕ ಅನಾವರಣ, ಮಹದೇವು ಅವರು ರಚಿಸಿರುವ ‘ಈಜೋ ಮೀನು ಮಾರಾಟಕ್ಕಲ್ಲ’ ಹಾಗೂ ಪಾಸಿಟಿವ್ ತಮ್ಮಯ್ಯನವರ ‘ಆಹಾರವೇ ಅಮೃತ-ದಿನಚರಿಯೇ ಜೀವನ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ಪರಿಸರ ಅಧಿಕಾರಿ ಯತೀಶ್ ಅವರನ್ನು ಅಭಿನಂದಿಸಲಾಯಿತು.ಕಲಾಮಂದಿರದ ಆವರಣದಲ್ಲಿ ಆಯೋಜಿಸಿದ್ದ ಸಾವಯವ ಸಂತೆಯಲ್ಲಿ ಸಾವಯವ ಕೃಷಿ ಉತ್ಪನ್ನಗಳು, ವಿವಿಧ ಬಗೆಯ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ವೇದಿಕೆಯಲ್ಲಿ ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ವಿ.ಸಿ.ಫಾರಂ ಕೃಷಿ ವಿವಿಯ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ಶಿಕ್ಷಣ ಇಲಾಖೆಯ ಡಾ.ಬಿ.ಸಿ.ದೊಡ್ಡೇಗೌಡ, ಎಸ್‌ಬಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಪ್ರೊ.ಬಿ.ಶಿವಲಿಂಗಯ್ಯ, ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ, ಲಯನ್ ಡಾ.ಕೃಷ್ಣೇಗೌಡ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಯರಹಳ್ಳಿ ಚಂದ್ರಶೇಖರ್, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕರಾದ ಸುಮನ ಹಾಗೂ ಕಾರಸವಾಡಿ ಮಹದೇವು ದಂಪತಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))